ರಾಷ್ಟ್ರೀಯ

ಮೊಬೈಲ್‌ ಸಿಮ್‌ಗೆ ಖರೀದಿಗೆ ಆಧಾರ್‌ ಕಡ್ಡಾಯ

Pinterest LinkedIn Tumblr


ನವದೆಹಲಿ: ಹೊಸ ಮೊಬೈಲ್‌ ಸಿಮ್‌ ಸಂಪರ್ಕ ಪಡೆಯಲು ಬಯಸುವವರು ಇನ್ನು ಮುಂದೆ ಆಧಾರ್‌ ಆಧಾರಿತ ವಿದ್ಯುನ್ಮಾನ–ದೃಢೀಕರಣ (ಇ–ಕೆವೈಸಿ: ಎಲೆಕ್ಟ್ರಾನಿಕ್‌–ನೋ ಯುವರ್‌ ಕಸ್ಟಮರ್‌) ಅರ್ಜಿಯನ್ನು ಭರ್ತಿ ಮಾಡಬೇಕಾಗುತ್ತದೆ. ಇಂತಹ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರವು ಸೋಮವಾರ ಸುಪ್ರೀಂ ಕೋರ್ಟ್‌ನ ಮುಂದಿಟ್ಟಿದೆ.

ಅಲ್ಲದೇ, ಹಾಲಿ ಮೊಬೈಲ್‌ ಬಳಕೆದಾರರ ಗುರುತು ಮತ್ತು ವಿವರಗಳನ್ನು ಪರಿಶೀಲಿಸುವುದಕ್ಕಾಗಿ ಹೊಸ ವ್ಯವಸ್ಥೆಯೊಂದನ್ನು ಜಾರಿಗೆ ತರಲಾಗುವುದು ಎಂದೂ ಕೋರ್ಟ್‌ಗೆ ತಿಳಿಸಿದೆ.

ನಕಲಿ ಮೊಬೈಲ್‌ ಸಂಪರ್ಕಗಳ ಹಾವಳಿಗೆ ಕಡಿವಾಣ ಹಾಕುವುದು ಮತ್ತು ಬಳಕೆದಾರರ ಗುರುತಿನ ವಿಶ್ವಾಸಾರ್ಹತೆ ಖಾತರಿ ಪಡಿಸುವುದಕ್ಕಾಗಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರದ ಪರವಾಗಿ ಸುಪ್ರೀಂ ಕೋರ್ಟ್‌ ಮುಂದೆ ಹೇಳಿಕೆ ನೀಡಿದ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ, ‘ಒಂದು ವರ್ಷದ ಒಳಗಾಗಿ ದೇಶದಾದ್ಯಂತ ಇರುವ 100 ಕೋಟಿ ಮೊಬೈಲ್‌ ಬಳಕೆದಾರರ ವಿವರಗಳನ್ನು ದಾಖಲಿಸಿಕೊಳ್ಳಲು ಹೊಸ ವ್ಯವಸ್ಥೆ ಜಾರಿಗೆ ತರಲಾಗುವುದು’ ಎಂದರು.

ಮುಖ್ಯ ನ್ಯಾಯಮೂರ್ತಿ ಜೆ.ಎಸ್‌. ಖೇಹರ್‌ ಮತ್ತು ನ್ಯಾಯಮೂರ್ತಿ ಎನ್‌.ವಿ. ರಮಣ ಅವರಿದ್ದ ನ್ಯಾಯಪೀಠ, ರೋಹಟಗಿ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತು.

‘ಒಟ್ಟು ಮೊಬೈಲ್‌ ಬಳಕೆದಾರರ ಪೈಕಿ ಶೇ 90ರಷ್ಟು ಮಂದಿ ಪ್ರೀ–ಪೇಯ್ಡ್‌ ಸಂಪರ್ಕ ಹೊಂದಿದ್ದಾರೆ. ಅವರು ಮೊಬೈಲ್‌ ರೀ–ಚಾರ್ಜ್‌ ಮಾಡುವ ಸಂದರ್ಭದಲ್ಲಿ ಗುರುತಿನ ವಿವರಗಳನ್ನು ಕೇಳಲು ಸಾಧ್ಯವಿದೆಯೇ’ ಎಂದು ಅಟಾರ್ನಿ ಜನರಲ್‌ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ರೋಹಟಗಿ, ‘ದೇಶದಾದ್ಯಂತ ಸಣ್ಣ ಪುಟ್ಟ ಅಂಗಡಿಗಳೂ ಪ್ರೀ–ಪೇಯ್ಡ್‌ ಮೊಬೈಲ್‌ಗಳನ್ನು ರೀ–ಚಾರ್ಜ್‌ ಮಾಡುವುದರಿಂದ ಇದು ಕಷ್ಟ’ ಎಂದು ಹೇಳಿದರು.

ಹಾಲಿ ಮೊಬೈಲ್ ಬಳಕೆದಾರರು ಮತ್ತು ಭವಿಷ್ಯದಲ್ಲಿ ಸಿಮ್‌ ಸಂಪರ್ಕ ಪಡೆಯುವವರ ಗುರುತು ಮತ್ತು ವಿಳಾಸಗಳನ್ನು ದೃಢಪಡಿಸಿಕೊಳ್ಳಲು ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ಮೊಬೈಲ್ ಬಳಕೆದಾರರು ನೀಡಿರುವ ವಿವರಗಳ ವಿಶ್ವಾಸಾರ್ಹತೆ ಪರಿಶೀಲಿಸಲು ನಿರ್ದಿಷ್ಟ ವ್ಯವಸ್ಥೆ ರೂಪಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕು ಎಂದು ಲೋಕನೀತಿ ಫೌಂಡೇಷನ್‌ ಎಂಬ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿತ್ತು.

ಮೊಬೈಲ್‌ ಫೋನ್‌ಗಳನ್ನು ಬ್ಯಾಂಕಿಂಗ್‌ ಉದ್ದೇಶಗಳಿಗಾಗಿಯೂ ಈಗ ಬಳಸುತ್ತಿರುವುದರಿಂದ ಬಳಕೆದಾರರ ಮಾಹಿತಿಗಳನ್ನು ಪರಿಶೀಲನೆಗೆ ಒಳಪಡಿಸುವುದು ಮುಖ್ಯವಾಗಿದೆ ಎಂದು ಅದು ವಾದಿಸಿತ್ತು.

Comments are closed.