ರಾಷ್ಟ್ರೀಯ

ದೇಶದಲ್ಲಿ ಬ್ಲಾಕ್‌ಬೆರಿ ಉತ್ಪಾದನಾ ಘಟಕ

Pinterest LinkedIn Tumblr


ನವದೆಹಲಿ: ಕೆನಡಾದ ಸ್ಮಾರ್ಟ್‌ಪೋನ್‌ ಕಂಪನಿ ಬ್ಲಾಕ್‌ಬೆರಿ ಶೀಘ್ರದಲ್ಲೇ ಭಾರತದಲ್ಲಿ ಉತ್ಪಾದನಾ ಘಟಕ ಆರಂಭಿಸಲಿದೆ.

ಆಪ್ಟಿಮಸ್‌ ಇನ್‌ಫ್ರಾಕಾಮ್‌ ಕಂಪೆನಿಯೊಂದಿಗಿನ ಮುಂದುವರಿದ ಒಪ್ಪಂದದಲ್ಲಿ ಬ್ಲಾಕ್‌ಬೆರಿ ‘ಮೇಕ್‌ ಇನ್‌ ಇಂಡಿಯಾ’ ಅಭಿಯಾನದ ಅಡಿ ತನ್ನ ಘಟಕ ಆರಂಭಿಸಲಿದೆ. ಇತ್ತೀಚೆಗೆ ಪ್ರತಿಷ್ಠಿತ ಆ್ಯಪಲ್‌ ಐಫೋನ್‌ ಉತ್ಪಾದನಾ ಘಟಕವನ್ನು ಬೆಂಗಳೂರಿನಲ್ಲಿ ಕಾರ್ಯಾರಂಭ ಮಾಡುವುದಾಗಿ ಘೋಷಿಸಿತ್ತು. ಭಾರತ ಸೇರಿದಂತೆ ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶದಲ್ಲೂ ತನ್ನ ಮಾರುಕಟ್ಟೆ ಅಭಿವೃದ್ಧಿಪಡಿಸಿಕೊಳ್ಳಲು ಬ್ಲಾಕ್‌ಬೆರಿ ಪ್ರಯತ್ನ ನಡೆಸಿದೆ.

ಭಾರತದಲ್ಲಿ ಅಧಿಕೃತ ಸೇವೆ ಪ್ರಾರಂಭಿಸಲು ನಿರ್ಧರಿಸಿರುವ ಬ್ಲಾಕ್‌ಬೆರಿ ಈ ಮೂಲಕ ತನ್ನ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ವಿಸ್ತರಿಸಲು ಮುಂದಾಗಿದೆ. ಸೆಕ್ಯುರಿಟಿ ಸಾಫ್ಟ್‌ವೇರ್‌, ಸೇವಾ ಮಳಿಗೆಗಳನ್ನು ಆಪ್ಟಿಮಸ್‌ ಜತೆ ಜಂಟಿ ಒಪ್ಪಂದದೊಂದಿಗೆ ಪ್ರಾರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಯಾಮ್‌ಸಂಗ್‌, ಆ್ಯಪಲ್ ಫೋನುಗಳ ಭರಾಟೆಯಲ್ಲಿ ಕಳೆಗುಂದಿರುವ ಬ್ಲಾಕ್‌ಬೆರಿ ಆಂಡ್ರಾಯ್ಡ್‌ ಫೋನುಗಳ ಮೂಲಕ ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಲು ಭಾರತವನ್ನು ವೇದಿಕೆಯಾಗಿಸಿಕೊಂಡಿದೆ.

‘ಜಾಗತಿಕ ಮಾರುಕಟ್ಟೆಯಲ್ಲಿ ಮತ್ತೆ ಪ್ರಗತಿ ಸಾಧಿಸಲು ಭಾರತದ ಮಾರುಕಟ್ಟೆಯಲ್ಲಿ ನಮ್ಮ ಸ್ಥಾನ ಭದ್ರಪಡಿಸಿಕೊಳ್ಳಲು ಮೇಕ್‌ ಇನ್‌ ಇಂಡಿಯಾ ಅಭಿಯಾನದ ಅಡಿ ಸೇವೆ ಒದಗಿಸಲು ಸಿದ್ಧರಾಗಿದ್ದೇವೆ ಎಂದು ಬ್ಲಾಕ್‌ಬೆರಿ ಉಪಾಧ್ಯಕ್ಷ ಅಲೆಕ್ಸ್‌ ಥರ್ಬರ್‌ ತಿಳಿಸಿದ್ದಾರೆ.

Comments are closed.