ರಾಷ್ಟ್ರೀಯ

ಬಂಗಾಳ ಕೊಲ್ಲಿಯಲ್ಲಿ ಹಡಗುಗಳ ಡಿಕ್ಕಿಯಿಂದ ತೈಲ ಸೋರಿಕೆ: ಜಲಚರಗಳಿಗೆ ಅಪಾಯ

Pinterest LinkedIn Tumblr


ಚೆನ್ನೈ, ಫೆ. ೩ – ಬಂಗಾಳ ಕೊಲ್ಲಿಯಲ್ಲಿ ತೈಲ ಸಾಗಣೆ ಹಡಗುಗಳ ಡಿಕ್ಕಿಯಿಂದ ಸೋರಿಕೆಯಾಗಿರುವ ತೈಲದಿಂದ ಚೆನ್ನೈ ಕಡಲ ತೀರ ಕಲುಷಿತಗೊಂಡಿದ್ದು, ಜಲಚರಗಳಿಗೆ ಅಪಾಯ ಒದಗುವ ಭೀತಿ ಎದುರಾಗಿದೆ.
ಕಡಲಲ್ಲಿ ತೈಲ ಹರಿಯುತ್ತಿರುವುದು ಮೀನುಗಾರರ ಬದುಕಿನ ಮೇಲೂ ಪರಿಣಾಮ ಬೀರಿದ್ದು, ಅವರ ದೈನಂದಿನ ಜೀವನಕ್ಕೂ ತೊಂದರೆ ಉಂಟು ಮಾಡಿದೆ.
ಕಳೆದ ಶನಿವಾರ ಬಂಗಾಲಕೊಲ್ಲಿಯಲ್ಲಿ ಎರಡು ತೈಲ ಸಾಗಣೆ ಹಡಗು ಡಿಕ್ಕಿಯಿಂದ 20 ಟನ್ ತೈಲ ಸೋರಿಕೆಯಾಗಿತ್ತು ಎಂದು ಅಂದಾಜಿಸಲಾಗಿತ್ತು. ಆದರೆ, ರಾಷ್ಟ್ರೀಯ ಸಮುದ್ರ ಮಾಹಿತಿ ಸೇವಾ ಕೇಂದ್ರದ ಮಾಹಿತಿಯಂತೆ 40 ಟನ್ ತೈಲ ಸೋರಿಕೆಯಾಗಿದ್ದು, ಚೆನ್ನೈನ 24.06 ಕಿ.ಮೀ ಕಡಲ ತೀರ ಮಾಲಿನ್ಯಗೊಂಡಿದೆ.
ಕಡಲ ತೀರದ ತೈಲವನ್ನು ತೆಗೆಯಲು ಸಮರೋಪಾದಿಯಲ್ಲಿ ಕೆಲಸ ನಡೆಯುತ್ತಿದ್ದು, ಇದುವರೆಗೂ 27 ಟನ್ ತೈಲ ಮಿಶ್ರಿತ ನೀರನ್ನು ತೆಗೆಯಲಾಗಿದೆ ಎಂದು ರಾಷ್ಟ್ರೀಯ ಕಡಲ ಮಾಹಿತಿ ಸೇವಾ ಕೇಂದ್ರ ಹೇಳಿದೆ.
ಘಟನಾ ಸ್ಥಳಕ್ಕೆ ಕೇಂದ್ರದ ಬಂದರು ಸಚಿವ ಪಿ. ರಾಧಾಕೃಷ್ಣನ್ ಭೇಟಿ ನೀಡಿದ್ದರು. ತೈಲ ಹರಡುವಿಕೆಯಿಂದ ಪರಿಸರದ ಮೇಲೆ ಯಾವುದೇ ಪರಿಣಾಮ ಆಗಿಲ್ಲ ಎಂದು ಕಾಮರಾಜರ್ ಬಂದರು ಸಂಸ್ಥೆ ಪ್ರಕಟಣೆಯಲ್ಲಿ ಹೇಳಿದೆ.
ಚೆನ್ನೈನ ತಿರುವಾನ್ಮಯೂರ್ ಬೀಚ್‌ನಲ್ಲಿ 1 ಟನ್‌ನಷ್ಟು ತೈಲ ಹರಡಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಮಿಳುನಾಡಿನ ಮೀನುಗಾರಿಕಾ ಸಚಿವ ಡಿ. ಜಯಕುಮಾರ್ ಹೇಳಿದರು.
ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ ಕಾಮರಾಜರ್ ಬಂದರು ಹಾಗೂ ಸ್ಥಳೀಯ ಮೀನುಗಾರರು, ಕರಾವಳಿ ಭದ್ರತಾ ಪಡೆಯ ಯೋಧರು ಸೇರಿದಂತೆ 500 ಮಂದಿ ತೈಲ ಮತ್ತಷ್ಟು ಹರಡದಂತೆ ನೋಡಿಕೊಳ್ಳುವ ಕೆಲಸದಲ್ಲಿ ತೊಡಗಿದ್ದಾರೆ.
ಸಮುದ್ರದಲ್ಲಿದ್ದ ತೈಲವನ್ನು ತೆಗೆಯಲು ತಕ್ಷಣ ಕ್ರಮ ಕೈಗೊಳ್ಳದ ಕಾರಣ ಮರೀನಾ ಬೀಚ್ ಸೇರಿದಂತೆ ಎಲ್ಲಾ ಕಡಲ ತೀರಗಳಿಗೂ ತೈಲ ವ್ಯಾಪಿಸಿತು ಎಂದು ದಕ್ಷಿಣ ಭಾರತ ಮೀನುಗಾರರ ಕಲ್ಯಾಣ ಸಂಘದ ಅಧ್ಯಕ್ಷ ಕೆ. ಭಾರತಿ ಆರೋಪಿಸಿದ್ದಾರೆ.
ಕರಾವಳಿ ಭದ್ರತಾ ಪಡೆ ಹಾಗೂ ಕಾಮರಾಜರ್ ಬಂದರು ನಡುವಿನ ಸಂಪರ್ಕ ಕೊರತೆಯಿಂದ ಪರಿಸ್ಥಿತಿ ಕೆಟ್ಟದಾಗಲು ಕಾರಣ ಎಂದು ಅವರು ದೂರಿದರು.
ಇಂತಹ ಪರಿಸ್ಥಿತಿಯನ್ನು ಎದುರಿಸಲು ಬಂದರು ಅಧಿಕಾರಿಗಳಿಗೆ ಪೂರ್ವ ಸಿದ್ಧತಾ ಕ್ರಮಗಳ ಬಗ್ಗೆ ಮಾಹಿತಿ ಇಲ್ಲ ಎಂದು ದೂರಿರುವ ಪರಿಸರವಾದಿ ನಿತ್ಯಾನಂದ ಇದರಿಂದ ಜಲಚರಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.

Comments are closed.