ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶ ಪರೀಕ್ಷೆ ನಡೆಸಲು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಸ್ಥಾಪಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಈ ಸಂಸ್ಥೆ ಸ್ವತಂತ್ರ ಸಂಸ್ಥೆಯಾಗಿ ಕಾರ್ಯ ನಿರ್ವಹಿಸಲಿದೆ.
ಜೆಇಇ, ಎನ್‌ಇಇಟಿ ಮೊದಲಾದ ಪ್ರವೇಶ ಪರೀಕ್ಷೆ ನಡೆಸುವ ಮತ್ತು ಇದಕ್ಕೆ ಸಂಬಂಧಿಸಿದ ಕಾರ್ಯಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಹಕ್ಕು ಈ ಸಂಸ್ಥೆಗಿರುತ್ತದೆ.
ಪ್ರಸ್ತುತ ಪ್ರವೇಶ ಪರೀಕ್ಷೆಗಳನ್ನು ನಡೆಸುವ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜ್ಯುಕೇಶನ್ (ಸಿಬಿಎಸ್‍ಇ), ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜ್ಯುಕೇಶನ್ (ಎಐಸಿಟಿಇ) ಮೊದಲಾದ ಸಂಸ್ಥೆಗಳ ಅಧಿಕಾರ ಕಾರ್ಯಗಳನ್ನು ಬಿಟ್ಟು ಶೈಕ್ಷಣಿಕ ವಿಷಯದ ಬಗ್ಗೆ ಮಾತ್ರ ಈ ಏಜೆನ್ಸಿ ಗಮನ ಹರಿಸಲಿದೆ ಎಂದು ಜೇಟ್ಲಿ ಹೇಳಿದ್ದಾರೆ.
ಇದಲ್ಲದೆ ದೇಶದ ವಿವಿಧ ಪ್ರದೇಶಗಳಲ್ಲಿ 100 ಕೌಶಲ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಕಲಾತ್ಮಕ ಮತ್ತು ನಾವೀನ್ಯವಿರುವ ಯೋಜನೆಗಳಿಗೆ ಪ್ರೋತ್ಸಾಹ ನೀಡಲಾಗುವುದು.
ಶೈಕ್ಷಣಿಕವಾಗಿ ಹಿಂದುಳಿದಿರುವ 3479 ಬ್ಲಾಕ್‍ಗಳ ಮೇಲೆ ಗಮನ ಹರಿಸಲಾಗುವುದು, 350 ಕೋರ್ಸ್‍ಗಳಿಗಾಗಿ ಸ್ವಯಂ ಪ್ಲಾಟ್‍ಫಾರಂನ್ನು ಆರಂಭಿಸುವ ಯೋಜನೆ ಹೊಂದಿದ್ದು ಇದು ಡಿಟಿಎಚ್ ಮೂಲಕ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ಜೇಟ್ಲಿ ಹೇಳಿದ್ದಾರೆ.
Comments are closed.