ರಾಷ್ಟ್ರೀಯ

ಬಜೆಟ್: ಹೊಸ ಯುಗದ ಆರಂಭ-ಮೋದಿ

Pinterest LinkedIn Tumblr


ನವದೆಹಲಿ, ಜ. ೩೧- ಸಾಮಾನ್ಯ ಮುಂಗಡ ಪತ್ರದ ಜೊತೆ ರೈಲ್ವೆ ಮುಂಗಡ ಪತ್ರವನ್ನು ವಿಲೀನಗೊಳಿಸಿ ನಾಳೆ ಸಂಸತ್ತಿನಲ್ಲಿ ಮಂಡನೆಯಾಗಲಿರುವ ಬಜೆಟ್ ಹೊಸ ಯುಗದ ಆರಂಭ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಸಂಸತ್ತಿನ ಜಂಟಿ ಸದನವನ್ನುದ್ದೇಶಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾಷಣ ಮಾಡುವುದಕ್ಕೂ ಮುನ್ನ ಸಂಸತ್‌ನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಧಾನಿ, ಬಜೆಟ್ ಅಧಿವೇಶನ ಸಂಪೂರ್ಣ ಜನರ ಒಳಿತಿಗಾಗಿ ಉಪಯೋಗವಾಗಲಿ. ಅಧಿವೇಶನದಲ್ಲಿ ಸಮರ್ಪಕ ಚರ್ಚೆಗಳಾಗಲಿ ಎಂದು ಸರ್ಕಾರ ನಿರೀಕ್ಷಿಸುತ್ತಿದೆ ಎಂದು ಹೇಳಿದರು.

ಅಧಿವೇಶನವನ್ನು ಸುಗಮವಾಗಿ ಹಾಗೂ ಸುಸೂತ್ರವಾಗಿ ನ‌ಡೆಸಲು ಅನುಕೂಲವಾಗುವಂತೆ ಎಲ್ಲಾ ಪಕ್ಷಗಳ ನಾಯಕರೊಂದಿಗೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಬಜೆಟ್ ಅಧಿವೇಶನದಲ್ಲಿ ಕೆಲವು ಮಹತ್ವದ ವಿಷಯಗಳ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ. ಇದಕ್ಕೆ ವಿರೋಧ ಪಕ್ಷದ ಸಹಕಾರ ಬೇಕು ಎಂದು ಮನವಿ ಮಾಡಿದರು.

ಸದನದ ನಡಾವಳಿಗಳು ನಿಗದಿಯಾದಂತೆ ನಡೆಯುವ ಸಂಬಂಧ ಕಳೆದ ಕೆಲ ದಿನಗಳಿಂದ ಸರ್ಕಾರ ವಿವಿಧ ರಾಜಕೀಯ ಪಕ್ಷಗಳ ಜೊತೆ ಚರ್ಚೆ ನಡೆಸಿದೆ. ಜನರ ಸಮಸ್ಯೆ ನಿವಾರಣೆಗೆ ಸಂಸತ್ತಿನಲ್ಲಿ ಸಮಗ್ರ ಚರ್ಚೆ ‌ನಡೆಯಬೇಕಾಗಿದೆ ಎಂದು ಅವರು ಬಯಸಿದರು.

ಸಮಾಜ ಕಲ್ಯಾಣಕ್ಕಾಗಿ ಎಲ್ಲಾ ಪಕ್ಷಗಳು ಒಟ್ಟಿಗೆ ಶ್ರಮಿಸುತ್ತವೆ ಎಂಬ ನಂಬಿಕೆ ತಮಗಿದೆ. ಇದೇ ಮೊದಲ ಬಾರಿಗೆ ಫೆ. 1 ರಂದು ಆಯವ್ಯಯವನ್ನು ಮಂಡಿಸಲಾಗುತ್ತಿದೆ. ಮೊದಲೆಲ್ಲಾ ಸಂಜೆ 5ಕ್ಕೆ ಬಜೆಟ್ ಮಂಡನೆಯಾಗುತ್ತಿತ್ತು. ವಾಜಪೇಯಿ ಅವರ ಕಾಲದಿಂದ ಅದನ್ನು ಮುಂಜಾನೆಗೆ ಮುಂದೂಡಿಕೊಳ್ಳಲಾಗಿದೆ.

ಈಗ ಮತ್ತೊಂದು ಹೊಸ ಸಂಪ್ರದಾಯ ಪ್ರಾರಂಭವಾಗಿದ್ದು ಒಂದು ತಿಂಗಳು ಮೊದಲೇ ಬಜೆಟ್ ಮಂಡನೆಯಾಗುತ್ತಿದೆ. ಅದಕ್ಕೆ ಮುಂಬರುವ ದಿನಗಳಲ್ಲಿ ಇದರ ಪ್ರಯೋಜನಗಳ ಬಗ್ಗೆ ಚರ್ಚೆ ನಡೆದು ಉತ್ತಮ ಫಲಿತಾಂಶ ದೊರೆಯಲಿದೆ ಎಂದು ಮೋದಿ ವಿವರಿಸಿದರು.

ಸಂಸತ್ತಿನ ಚಳಿಗಾಲದ ಅಧಿವೇಶನ ನೋಟು ಅಪಮೌಲ್ಯದಿಂದಾಗಿ ಸಂಪೂರ್ಣ ವ್ಯರ್ಥವಾದ ಹಿನ್ನೆಲೆಯಲ್ಲಿ ಪ್ರಧಾನಿಯವರು ಎಲ್ಲ ವಿರೋಧ ಪಕ್ಷಗಳೊಂದಿಗೆ ನಿನ್ನೆ ಮಾತುಕತೆ ನಡೆಸಿದರು. ತೃಣಮೂಲ ಕಾಂಗ್ರೆಸ್ ಹೊರತಾಗಿ ಎಲ್ಲ ಪ್ರಮುಖ ಪಕ್ಷಗಳೂ ಸಭೆಯಲ್ಲಿ ಪಾಲ್ಗೊಂ‌ಡಿದ್ದವು.

Comments are closed.