ರಾಷ್ಟ್ರೀಯ

ಮುಲಾಯಂ ಕಿರಿ ಸೊಸೆ ಲಖನೌ ಕಂಟೋನ್ಮೆಂಟ್ ನಿಂದ ಸ್ಪರ್ಧೆ

Pinterest LinkedIn Tumblr


ಲಖನೌ: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ತನ್ನ ಅಭ್ಯರ್ಥಿಗಳ 4 ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮುಲಾಯಂ ಸಿಂಗ್ ಯಾದವ್ ಕಿರಿ ಸೊಸೆ ಅಪರ್ಣಾ ಯಾದವ್ ಲಖನೌ ಕಂಟೋನ್ಮೆಂಟ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಮುಲಾಯಂ ಸಿಂಗ್ ಯಾದವ್ ಕಿರಿಯ ಪುತ್ರ ಪ್ರತೀಕ್ ಯಾದವ್ ಪತ್ನಿ ಅಪರ್ಣಾ ಯಾದವ್ ವಿರುದ್ಧ ಇತ್ತೀಚೆಗಷ್ಟೇ ಬಿಜೆಪಿ ಸೇರ್ಪಡೆಯಾದ ರೀಟಾ ಬಹುಗುಣಾ ಜೋಷಿ ಕಣಕ್ಕಿಳಿದಿದ್ದಾರೆ. ಮ್ಯಾಂಚೆಸ್ಟರ್ ವಿವಿಯಲ್ಲಿ ಅಂತಾರಾಷ್ಟ್ರೀಯ ರಾಜಕೀಯ ವಿಷಯದ ಪದವೀಧರೆಯಾಗಿರುವ ಅಪರ್ಣಾ ಯಾದವ್ ಗೆ ಮತ್ತೋರ್ವ ಸ್ಪರ್ಧಿಯಾಗಿ ಯೋಗೇಶ್ ದೀಕ್ಷಿತ್ ಬಿಎಸ್ ಪಿಯಿಂದ ಸ್ಪರ್ಧಿಸುತ್ತಿದ್ದಾರೆ.

1991 ರಿಂದ ಬಿಜೆಪಿಯ ಭದ್ರಕೋಟೆಯಾಗಿದ್ದ ಲಖನೌ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದಲ್ಲಿ 2012 ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ರೀಟಾ ಬಹುಗುಣಾ ಗೆದ್ದಿದ್ದರು. ಆದರೆ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ರೀಟಾ ಬಹುಗುಣಾ ಬಿಜೆಪಿಯಿಂದಲೇ ಸ್ಪರ್ಧಿಸುತ್ತಿದ್ದು, ಲಖನೌ ಕಂಟೋನ್ಮೆಂಟ್ ಕ್ಷೇತ್ರ ಜಿದ್ದಾಜಿದ್ದಿನ ಹಣಾಹಣಿ ನಡೆಯುವ ಸಾಧ್ಯತೆಯೇ ಹೆಚ್ಚಿದೆ.
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು ಸೀಟು ಹಂಚಿಕೆಯಾಗಿರುವ ಹಿನ್ನೆಲೆಯಲ್ಲಿ ಲಖನೌ ಕಂಟೋನ್ಮೆಂಟ್ ಕ್ಷೇತ್ರದಿಂದ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಇರಲು ನಿರ್ಧರಿಸಿದೆ. ಸಮಾಜವಾದಿ ಪಕ್ಷ 31 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಸಿಎಂ ಅಖಿಲೇಶ್ ಯಾದವ್ ಮುಬಾರಕ್ ಪುರದಿಂದ ಸ್ಪರ್ಧಿಸಲಿದ್ದಾರೆ.

Comments are closed.