ರಾಷ್ಟ್ರೀಯ

ಎಟಿಎಂನಲ್ಲಿ ವಿತ್‍ಡ್ರಾ ಮಾಡಿದ್ದು 3500, ಬಂದಿದ್ದು 70,000!

Pinterest LinkedIn Tumblr


ಜೈಪುರ್: ರಾಜಸ್ತಾನದ ಟೋಂಕ್ ನಿವಾಸಿ ಜಿತೇಶ್ ದಿವಾಕರ್ ಎಂಬವರು ಎಟಿಎಂನಿಂದ ವಿತ್‍ಡ್ರಾ ಮಾಡಬಯಸಿದ್ದು ₹3500. ವಿತ್‍ಡ್ರಾ ಮಾಡಬೇಕಾದ ಹಣ ₹3500 ಎಂದು ನಮೂದಿಸಿದಾಗ ಸಿಕ್ಕಿದ್ದು ₹70,000!

ದಿವಾಕರ್ ಮಾತ್ರವಲ್ಲ ಮಂಗಳವಾರ ಸಂಜೆ ಇದೇ ಎಟಿಎಂನಿಂದ ಹಣ ವಿತ್‍ಡ್ರಾ ಮಾಡಿದವರಿಗೆ ತಾವು ನಮೂದಿಸಿದ ಹಣಕ್ಕಿಂತ ಹೆಚ್ಚಿನ ಹಣ ಸಿಕ್ಕಿದೆ. ಆದರೆ ದಿವಾಕರ್ ಮಾತ್ರ ಎಟಿಎಂ ಸಮಸ್ಯೆಯನ್ನು ಬ್ಯಾಂಕ್‍ನವರಿಗೆ ತಿಳಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.

ಜೈಪುರದಿಂದ 80 ಕಿಮೀ ದೂರದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಎಟಿಎಂನಲ್ಲಿ ಈ ರೀತಿ ಎಡವಟ್ಟು ಸಂಭವಿಸಿದೆ. ಹಣ ವಿತ್‍ಡ್ರಾ ಮಾಡಲು ಬಂದವರಿಗೆ ಎಲ್ಲ ಬಹು ಮೊತ್ತದ ಹಣವೇ ಸಿಕ್ಕಿದ್ದು, ಯಾರೊಬ್ಬರೂ ಈ ಬಗ್ಗೆ ಬ್ಯಾಂಕ್‍ನವರಿಗೆ ತಿಳಿಸಿರಲಿಲ್ಲ.

ಇಷ್ಟೊಂದು ದುಡ್ಡು ಸಿಕ್ಕಿದಾಗ ನಾನು ಅಪ್ಪನಿಗೆ ಫೋನ್ ಮಾಡಿ, ಆಮೇಲೆ ಬ್ಯಾಂಕ್ ಮ್ಯಾನೇಜರ್‍ ಗೆ ಸುದ್ದಿ ತಿಳಿಸಿದೆವು ಎಂದು ದಿವಾಕರ್ ಹೇಳಿದ್ದಾರೆ.

ವಿಷಯ ಗೊತ್ತಾದ ಕೂಡಲೇ ಬ್ಯಾಂಕ್ ಅಧಿಕಾರಿಗಳು ಎಟಿಎಂನ್ನು ಮುಚ್ಚಿದ್ದಾರೆ. ಅಲ್ಲಿಯವರೆಗೆ ಆ ಎಟಿಎಂನಿಂದ ₹6.76 ಲಕ್ಷ ದುಡ್ಡು ವಿತ್‍ಡ್ರಾ ಮಾಡಲಾಗಿದೆ.

ಎಟಿಎಂ ಮೆಷೀನ್‍ನಲ್ಲಿ ₹100 ನೋಟುಗಳಿಗಿರುವ ಜಾಗದಲ್ಲಿ ₹2000 ಗಳನ್ನು ತುಂಬಿಸಿದ್ದರಿಂದ ಎಟಿಎಂ ₹100 ಬದಲು ₹2000 ನೀಡುತ್ತಿತ್ತು ಎಂದು ಬ್ಯಾಂಕ್‍ ಮ್ಯಾನೇಜರ್ ಹರಿಶಂಕರ್ ಮೀನಾ ಹೇಳಿದ್ದಾರೆ.

Comments are closed.