ರಾಷ್ಟ್ರೀಯ

21 ವರ್ಷಗಳ ಬಳಿಕ ಎನ್ ಡಿಟಿವಿ ತೊರೆದ ಬರ್ಖಾ ದತ್!

Pinterest LinkedIn Tumblr


ನವದೆಹಲಿ: ಹಿರಿಯ ಪತ್ರಕರ್ತೆ ಹಾಗೂ ಎನ್‌ಡಿಟಿವಿ (ನ್ಯೂ ಡೆಲ್ಲಿ ಟೆಲಿವಿಷನ್ ಲಿಮಿಟೆಡ್)ಯ ಸಲಹಾ ಸಂಪಾದಕಿ ಬರ್ಖಾ ದತ್ ಅವರು ಭಾನುವಾರ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಎನ್ ಡಿವಿ ಸಂಸ್ಥೆ ತನ್ನ ಅಧಿಕೃತ ವೆಬ್ ಸೈಟಿನಲ್ಲಿ ವರದಿ ಪ್ರಕಟ ಮಾಡಿದ್ದು, ಕಳೆದ 21 ವರ್ಷಗಳಿಂದ ವಾಹಿನಿಯ ಏಳಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬರ್ಖಾ ದತ್ ಅವರು ಹೊಸ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹಾರೈಸಿದೆ. ವಾಹಿನಿಯೊಂದಿಗೆ ಸುದೀರ್ಘ ಅವಧಿಗೆ ಕಾರ್ಯ ನಿರ್ವಹಿಸಿದ್ದಕ್ಕಾಗಿ ದತ್ ಅವರನ್ನು ಪ್ರಶಂಸಿಸಿರುವ ಸುದ್ದಿ ಸಂಸ್ಥೆಯು, ಅವರ ಉತ್ತಮ ಭವಿಷ್ಯಕ್ಕಾಗಿ ಶುಭಾಶಯಗಳನ್ನು ಕೋರಿದೆ.
ಮೂಲಗಳ ಪ್ರಕಾರ ಬರ್ಖಾ ದತ್ ಅವರು ತಮ್ಮದೇ ಆದ ಉದ್ಯಮವೊಂದನ್ನು ಆರಂಭಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
1995ರಲ್ಲಿ ಬರ್ಖಾ ದತ್ ಅವರು ಎನ್‌ಡಿಟಿವಿ ವಾಹಿನಿಗೆ ಸೇರಿದ್ದರು. 1999ರಲ್ಲಿ ಕಾರ್ಗಿಲ್ ಯುದ್ಧ ಕುರಿತ ತನ್ನ ನಿರ್ಭೀತ ವರದಿಗಾರಿಕೆಯಿಂದಾಗಿ ಪತ್ರಿಕೋದ್ಯಮದಲ್ಲಿ ಹೆಚ್ಚು ಖ್ಯಾತಿ ಪಡೆದರು. ತಮ್ಮ ನಿರ್ಭೀತ ವರದಿಗಳಿಂದಾಗಿಯೇ ಖ್ಯಾತಿ ಗಳಿಸಿದ್ದ ಬರ್ಖಾ ದತ್ ಅವರು ಪದ್ಮಶ್ರೀ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.ಇದಲ್ಲದೇ ಹಲವು ವಿವಾದಗಳಲ್ಲೂ ಬರ್ಖಾ ದತ್ ಹೆಸರು ಕೇಳಿಬಂದಿತ್ತು. ವಿವಾದಾತ್ಮಕ ರಾಡಿಯಾ ಟೇಪ್‌’ಗಳಲ್ಲಿ ಬರ್ಖಾ ದತ್ ಪಾತ್ರವಿರುವ ಬಗ್ಗೆ ಊಹಾಪೋಹಗಳು ಕೇಳಿಬಂದಾಗ ಬರ್ಖಾ ದತ್ ಅವರು ಎನ್ ಡಿಟಿವಿ ತ್ಯಜಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು.
“ಅರ್ನಾಬ್ ನದ್ದು ರಿಪಬ್ಲಿಕ್ ಆದರೆ, ಬರ್ಕಾ ಅವರದ್ದು ಆ್ಯಂಟಿ ರಿಪಬ್ಲಿಕ್..?”; ಟ್ವೀಟಿಗರ ಟ್ರೋಲ್
ಇತ್ತೀಚೆಗಷ್ಟೇ ಟೈಮ್ಸ್ ನೌ ಸುದ್ದಿ ಸಂಸ್ಥೆಯನ್ನು ತೊರೆದಿದ್ದ ಅರ್ನಾಬ್ ಗೋಸ್ವಾಮಿರೊಂದಿಗಿನ ಟ್ವೀಟ್ ಸಮರದಲ್ಲಿ ಹೆಚ್ಚು ಸುದ್ದಿಗೆ ಗ್ರಾಸವಾಗಿದ್ದ ಬರ್ಕಾ ದತ್ ಟ್ವೀಟಿಗರಿಂದ ಹೆಚ್ಚು ಕಾಲೆಳೆಯಲ್ಪಟ್ಟಿದ್ದರು. ಇದೀಗ ಬರ್ಖಾ ದತ್ ಅವರು ಹುದ್ದೆ ತ್ಯಜಿಸಿರುವುದರಿಂದ ಮತ್ತೆ ಟ್ವೀಟಿಗರು ದತ್ ಅವರ ಕುರಿತಂತೆ ವ್ಯಂಗ್ಯ ಮಾಡುತ್ತಿದ್ದಾರೆ.

Comments are closed.