ರಾಷ್ಟ್ರೀಯ

ಆರೋಪದ ಕುರಿತು ಬಿಎಸ್ಎಫ್ ಆಂತರಿಕ ತನಿಖೆಯ ಬದಲು ಸಿಬಿಐ ತನಿಖೆಯಾಗಲಿ: ಯೋಧನ ಪತ್ನಿ

Pinterest LinkedIn Tumblr


ನವದೆಹಲಿ (ಜ.14): ಯೋಧರ ಆರೋಪದಲ್ಲಿ ಯಾವುದೇ ಸತ್ಯಾಂಶವಿಲ್ಲವೆಂದು ಗೃಹ ಇಲಾಖೆಯು ಪ್ರಧಾನಿ ಕಾರ್ಯಾಲಯಕ್ಕೆ ಸ್ಪಷ್ಟಿಕರಣ ನೀಡಿರುವ ಬೆನ್ನಲ್ಲೇ ಯೋಧರ ಕುಟುಂಬಸ್ಥರು ಆ ಕುರಿತು ಸಿಬಿಐ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ.
ತನ್ನ ಪತಿ ತೇಜ್ ಬಹಾದ್ದೂರ್ ಮಾಡಿರುವ ಆರೋಪದ ಬಗ್ಗೆ ಬಿಎಸ್ಎಫ್ ಆಂತರಿಕ ತನಿಖೆಯ ಬದಲು ಸಿಬಿಐ ತನಿಖೆಯಾಗಬೇಕು. ತಮ್ಮ ತಪ್ಪನ್ನು ಮುಚ್ಚಿಹಾಕಲು ಅಧಿಕಾರಿಗಳು ಪ್ರಯತ್ನಿಸುತ್ತಾರೆ ಹಾಗೂ ತನಿಖೆಯು ಕೂಡಾ ಪೂರ್ವಾಗ್ರಹಪೀಡಿತವಾಗಿರುವ ಎಲ್ಲಾ ಸಾಧ್ಯತೆಗಳಿವೆ ಎಂದು ಶರ್ಮಿಳಾ ಹೇಳಿದ್ದಾರೆ.
ಕಳೆದೆರಡು ದಿನಗಳಿಂದ ತೇಜ್ ಬಹಾದ್ದೂರ್ ಜೊತೆ ಮಾತನಾಡಲು ಸಾಧ್ಯವಾಗುತ್ತಿಲ್ಲವೆಂದು ಶರ್ಮಿಳಾ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಹಿರಿಯ ಅಧಿಕಾರಿಗಳು ಯೋಧರನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯಬಿಡುವ ಮೂಲಕ ದೇಶಾದಾದ್ಯಂತ ಬಿಎಸ್’ಎಫ್ ಯೋಧ ತೇಜ್ ಪ್ರತಾಪ್ ಯಾದವ್ ಸಂಚಲನ ಮೂಡಿಸಿದ್ದರು. ಗಡಿ ಕಾಯುವ ಯೋಧರಿಗೆ ಒದಗಿಸಲಾಗುವ ಕಳಪೆ ಆಹಾರ ಹಾಗೂ ಇನ್ನಿತರ ಅವ್ಯವಸ್ಥೆಗಳ ಬಗ್ಗೆ ಬಿಎಸ್’ಎಫ್ ಹಾಗೂ ಸಿಆರ್’ಪಿಎಫ್ ಯೋಧರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್’ಲೋಡ್ ಮಾಡಿದ್ದರು.
ಆ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪ್ರಧಾನಿ ಕಾರ್ಯಾಲಯವು ಸಮಗ್ರ ವರದಿ ನೀಡುವಂತೆ ಗೃಹ ಇಲಾಖೆಗೆ ಸೂಚಿಸಿತ್ತು. ಯೋಧರು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಗೃಹ ಇಲಾಖೆಯು ನಿನ್ನೆ ಪ್ರಧಾನಿ ಕಾರ್ಯಾಲಯಕ್ಕೆ ನೀಡಿರುವ ಸ್ಪಷ್ಟೀಕರಣದಲ್ಲಿ ಹೇಳಿತ್ತು.

Comments are closed.