ರಾಷ್ಟ್ರೀಯ

ನೋಟು ನಿಷೇಧ ಅಂದರೆ ಏನು ಎಂದು ಈ ಮಹಿಳೆ ಕೇಳ್ತಾರೆ

Pinterest LinkedIn Tumblr


ಎರ್ನಾಕುಳಂ: 75ರ ಹರೆಯದ ಸತೀ ಬಾಯಿ ಕಳೆದ ವಾರ ದಿನಸಿ ತರಲೆಂದು ಅಂಗಡಿಗೆ ಹೋದಾಗ, ಅಂಗಡಿಯವರು ₹500 ಮತ್ತು ₹1000 ಮುಖಬೆಲೆಯ ನೋಟನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

ಇದು ಯಾಕೆ ಹೀಗೆ ಎಂದು ಕೇಳಿದಾಗ, ಅಂಗಡಿಯವರು ನೋಟು ಅಮಾನ್ಯ ಮಾಡಿರುವ ಬಗ್ಗೆ ಹೇಳಿದ್ದಾರೆ.

ನೋಟು ಅಮಾನ್ಯ ಮಾಡುವುದು ಅಂದರೆ ಏನು? ಸತೀ ಅಚ್ಚರಿಯಿಂದಲೇ ಕೇಳುತ್ತಾರೆ.

ಕೇರಳದ ಎರ್ನಾಕುಳಂ ಜಿಲ್ಲೆಯ ವರಾಪ್ಪುಳ ಎಂಬಲ್ಲಿ ಪುಟ್ಟ ಮನೆಯೊಂದರಲ್ಲಿ ವಾಸಿಸುವ ಸತೀ, 20 ವರುಷಗಳ ಹಿಂದೆ ರಾಜ್ಯ ಪಶುಸಂಗೋಪನಾ ಇಲಾಖೆಯ ಕೆಲಸದಿಂದ ನಿವೃತ್ತಿ ಹೊಂದಿದ್ದರು. ಹೊರ ಜಗತ್ತಿನೊಂದಿಗೆ ಯಾವುದೇ ಸಂಪರ್ಕವಿಲ್ಲದೇ ಸತೀ ತಮ್ಮ ಮನೆಯಲ್ಲಿ ಏಕಾಂಗಿಯಾಗಿ ಬದುಕು ಸಾಗಿಸುತ್ತಿದ್ದಾರೆ.

ಸತೀ ಅವರು ಫೋನ್ ಬಳಸುತ್ತಿಲ್ಲ, ಟೀವಿ ನೋಡುವುದಿಲ್ಲ, ಪತ್ರಿಕೆಯನ್ನೂ ಓದುವುದಿಲ್ಲ. ನನಗೆ ಇಲ್ಲಿ ವಿದ್ಯುತ್ ಸಂಪರ್ಕವೂ ಇಲ್ಲ. ನನಗೆ ಅದರ ಅಗತ್ಯವೂ ಇಲ್ಲ. ಟೀವಿಯನ್ನು ಹೇಗೆ ಆನ್ ಮಾಡುವುದು ಎಂದೂ ನನಗೆ ಗೊತ್ತಿಲ್ಲ, ನನ್ನ ಜೀವನದಲ್ಲಿ ನಾನು ಯಾವತ್ತೂ ಫೋನ್ ಬಳಸಿಲ್ಲ ಎಂದು ನ್ಯೂಸ್ ಮಿನಿಟ್ ಜತೆ ಮಾತನಾಡಿದ ಸತೀ ಹೇಳಿದ್ದಾರೆ.

ಮನೆಯಲ್ಲಿ ದಿನಸಿ, ತರಕಾರಿ ಮುಗಿದಾಗ ಯಾವತ್ತಾದರೂ ಒಂದು ದಿನ ನಾನು ಮನೆಯಿಂದ ಹೊರಗೆ ಕಾಲಿಡುತ್ತೇನೆ.

ನನ್ನ ಪಿಂಚಣಿ ಹಣ ನೇರವಾಗಿ ನನ್ನ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ನನಗೆ ಏನಾದರೂ ಬೇಕು ಎಂದಾಗ ನಾನು ಅದರಿಂದ ಸ್ವಲ್ಪ ಹಣ ವಿತ್‍ಡ್ರಾ ಮಾಡುತ್ತೇನೆ. ಕಳೆದ ಎರಡು ತಿಂಗಳಲ್ಲಿ ಸಿಕ್ಕಿದ ಪಿಂಚಣಿ ಹಣ ಹೊಸ ನೋಟುಗಳದ್ದೇ ಆಗಿತ್ತು.

ಆದರೆ ನೋಟು ಅಮಾನ್ಯವಾಗಿರುವ ಬಗ್ಗೆ ಈಕೆಗೆ ಸಂಗತಿಯೇ ಗೊತ್ತಿರಲಿಲ್ಲ. ಅಂಗಡಿಯವನು ಹಳೆ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದ ನಂತರ, ಈಕೆ ತನ್ನಲ್ಲಿದ್ದ ₹500 ಮತ್ತು ₹1000 ನೋಟುಗಳ ಕಂತೆಗಳನ್ನು ತೆಗೆದುಕೊಂಡು ಜನವರಿ ಮೊದಲ ವಾರ ಸ್ಟೇಟ್ ಬ್ಯಾಂಕ್ ಆಫ್ ಟ್ರಾವಂಕೂರ್‍- ವರಾಪ್ಪುಳ ಶಾಖೆಯನ್ನು ಸಂಪರ್ಕಿಸಿದ್ದಾರೆ.

ಆದರೆ ಈಗಾಗಲೇ ಹಳೆ ನೋಟು ಜಮೆ ಮಾಡುವ ಸಮಯ ಮುಗಿದಿರುವ ಕಾರಣ ಬ್ಯಾಂಕ್‍ನವರು ಹಣ ಸ್ವೀಕರಿಸಲಿಲ್ಲ.

ಈ ಬಗ್ಗೆ ಬ್ಯಾಂಕ್ ಸಿಬ್ಬಂದಿ ಹೇಳಿದರೂ ಸತೀ ಅವರು ನಮ್ಮೊಂದಿಗೆ ಜಗಳ ಮಾಡಿದ್ದಾರೆ. ಅವರ ಕೈಯಲ್ಲಿದ್ದ ಹಣವನ್ನು ನಾವು ಎಣಿಸಿ ನೋಡಿಲ್ಲ. ಆದರೆ ₹5 ಲಕ್ಷದಷ್ಟು ಮೊತ್ತ ಅದರಲ್ಲಿದ್ದಿರಬೇಕು ಎಂದು ಬ್ಯಾಂಕ್‍ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ವರಾಪ್ಪುಳದಲ್ಲಿ ಭಗವತೀ ಪರಂಬು ಎಂಬಲ್ಲಿ ಎರಡು ಕೋಣೆಗಳಿರುವ ಪುಟ್ಟ ಮನೆಯಲ್ಲಿ ಸತೀ ವಾಸವಾಗಿದ್ದಾರೆ. ಮನೆಯ ಸುತ್ತಲೂ ಪೊದೆ, ಕುರುಚಲು ಗಿಡಗಳು ತುಂಬಿದ್ದು, ಈಕೆಯ ಕಾಂಪೌಂಡ್‍ನೊಳಗೆ ಯಾರೂ ಬರುವುದು ಆಕೆಗೆ ಇಷ್ಟವಿಲ್ಲ. ಜನ ಸಂಪರ್ಕವೇ ಇಲ್ಲದೆ ಒಂಟಿಯಾಗಿ ಈಕೆ ಬದುಕುತ್ತಿದ್ದಾರೆ.

ಅವರು ಯಾರೊಂದಿಗೂ ಮಾತನಾಡುವುದಿಲ್ಲ, ನಾವೇನಾದೂ ತಿಂಡಿ ಕೊಟ್ಟರೂ ಅದನ್ನು ತಿನ್ನಲು ಆಕೆ ಹೆದರುತ್ತಾರೆ. ಹಲವಾರು ವಾರ ಮನೆಯ ಬಾಗಿಲು ತೆರೆಯದೆ ಒಳಗೆ ಇದ್ದು ಬಿಡುತ್ತಾರೆ. ಆಕೆಯ ಬಳಿ ಇಷ್ಟೊಂದು ದುಡ್ಡು ಇತ್ತು ಎಂದು ನಂಬಲಾಗುತ್ತಿಲ್ಲ ಅಂತಾರೆ ಸತೀ ಅವರ ನೆರೆಮನೆಯ ಮಹಿಳೆ ರಾಧಾ.

ನನ್ನನ್ನು ವಂಚಿಸಲು ಎಲ್ಲರೂ ಕಾಯುತ್ತಿದ್ದಾರೆ, ಎಲ್ಲರಿಗೂ ನನ್ನ ಹಣದ ಮೇಲೆಯೇ ಕಣ್ಣು, ನಾನು ಯಾರನ್ನೂ ನಂಬುವುದಿಲ್ಲ ಎಂದು ಸತೀ ಹೇಳುತ್ತಿದ್ದಾರೆ.
ನನಗಿದ್ದದ್ದು ಒಬ್ಬಳೇ ಮಗಳು. ವರ್ಷಗಳ ಹಿಂದೆ ಅವಳೂ ಸತ್ತು ಹೋದಳು. ನಾನು ಯೌವನದಲ್ಲಿದ್ದಾಗ ನನ್ನ ಗಂಡನೂ ಸತ್ತು ಹೋಗಿದ್ದಾರೆ. ನಾನೊಬ್ಬಳೇ ಎಲ್ಲವನ್ನೂ ಸಂಭಾಳಿಸುತ್ತಿದ್ದೇನೆ. ನನ್ನನ್ನು ವಂಚಿಸಲೆಂದೇ ಜನರು ನನ್ನ ಬಳಿ ಬರುತ್ತಾರೆ ಅಂತಾರೆ ಸತೀ.

ಈ ಹಿಂದೆ ಯಾರೋ ಒಬ್ಬರು ಆಕೆಯ ಹಣವನ್ನು ದೋಚಲು ಯತ್ನಿಸಿದ್ದರಂತೆ.

ಸತೀ ಅವರ ಕಷ್ಟ ನೋಡಿ ವರಾಪ್ಪುಳ ಪಂಚಾಯತ್ ಸಮಿತಿ ಭಾರತೀಯ ರಿಸರ್ವ್ ಬ್ಯಾಂಕ್‍ನ್ನು ಸಂಪರ್ಕಿಸಿತ್ತು. ಆದರೆ ನನಗೆ ಪ್ರತೀ ತಿಂಗಳು ಪಿಂಚಣಿ ಸಿಗುತ್ತಿದೆ. ನನಗೆ ಯಾರ ಸಹಾಯವೂ ಬೇಡ ಎಂದು ಸತೀ ಎಲ್ಲವನ್ನೂ ನಿರಾಕರಿಸುತ್ತಿದ್ದಾರೆ.

ನನ್ನ ಹಣದಲ್ಲಿ ಯಾರಿಗೂ ಪಾಲು ಸಿಗಲ್ಲ ಎಂದು ಖಡಕ್ ಆಗಿಯೇ ಹೇಳುತ್ತಿದ್ದಾರೆ ಈ ಮಹಿಳೆ.

ಇತ್ತೀಚಿನ ಸುದ್ದಿಯೇನೆಂದರೆ ಮಂಗಳವಾರ ಸಂಜೆ ಸತೀ ಅವರ ಮನೆ ಮೇಲೆ ಪೊಲೀಸ್ ಮತ್ತು ಪಂಚಾಯತ್ ಸದಸ್ಯರು ದಾಳಿ ನಡೆಸಿ ₹4 ಲಕ್ಷದಷ್ಟು ಹಳೆ ನೋಟುಗಳನ್ನು ವಶ ಪಡಿಸಿಕೊಂಡಿದ್ದಾರೆ.

ಆದಾಗ್ಯೂ, ಸತೀ ಅವರು ವಯಸ್ಸಾದ ಮಹಿಳೆ ಆಗಿರುವುದರಿಂದ ಮತ್ತು ಅವರಿಗೆ ನೋಟು ರದ್ದತಿ ವಿಷಯ ಗೊತ್ತಿಲ್ಲದೇ ಇರುವ ಕಾರಣ ಆಕೆಗೆ ಸಹಾಯ ಮಾಡಲು ಆದಾಯ ತೆರಿಗೆ ಇಲಾಖೆಯ್ಲಿ ಮನವಿ ಮಾಡುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

Comments are closed.