ರಾಷ್ಟ್ರೀಯ

ಯೋಧ ತೇಜ್ ಬಹದ್ದೂರ್ರ ಫೇಸ್‍ಬುಕ್ ಖಾತೆಯಲ್ಲಿ ವಿಡಿಯೊ ಅಪ್‍ಲೋಡ್ ಮಾಡಿದ್ದು ಯಾರು ಗೊತ್ತಾ?

Pinterest LinkedIn Tumblr


ನವದೆಹಲಿ: ಯೋಧರಿಗೆ ನೀಡುತ್ತಿರುವ ಕಳಪೆ ಆಹಾರದ ಬಗ್ಗೆ ಫೇಸ್‍ಬುಕ್‍ನಲ್ಲಿ ವಿಡಿಯೊ ಅಪ್‍ಲೋಡ್ ಮಾಡಿದ್ದು ಗಡಿ ರಕ್ಷಣಾ ಪಡೆಯ ಯೋಧ ತೇಜ್ ಬಹದ್ದೂರ್ ಯಾದವ್ ಅಲ್ಲ!

ಬಿಎಸ್‍ಎಫ್ ಯೋಧರಿಗೆ ಈ ರೀತಿಯ ಕಳಪೆ ಆಹಾರ ನೀಡಲಾಗುತ್ತಿದೆ. ಇದನ್ನು ಸೇವಿಸಿ ಕರ್ತವ್ಯ ನಿರ್ವಹಿಸುವುದಾದರೂ ಹೇಗೆ? ಎಂದು ಸೇನಾ ಶಿಬಿರದ ಅವ್ಯವಸ್ಥೆಯ ಬಗ್ಗೆ ವಿಡಿಯೊ ಅಪ್‍ಲೋಡ್ ಮಾಡಿ ಗಡಿ ರಕ್ಷಣಾ ಪಡೆಯ 29ನೇ ಬೆಟಾಲಿಯನ್‍ನ ಯೋಧ ಯಾದವ್ ಸುದ್ದಿಯಾಗಿದ್ದಾರೆ.

ಯೋಧ ಯಾದವ್ ಅಪ್‍ಲೋಡ್ ಮಾಡಿದ ವಿಡಿಯೊಗಳು ಸಂಚಲನ ಸೃಷ್ಟಿಸುತ್ತಿದ್ದಂತೆ, ಅದೊಂದು ನಕಲಿ ಖಾತೆ ಎಂಬ ಆರೋಪವೂ ಕೇಳಿ ಬರುತ್ತಿದೆ.

ಆದರೆ ಇದು ನಕಲಿ ಖಾತೆ ಅಲ್ಲ. ಯೋಧ ತೇಜ್ ಅವರ ಪತ್ನಿಯಾದ ನಾನು ಈ ಖಾತೆಯನ್ನು ನಿರ್ವಹಿಸುತ್ತಿದ್ದೇನೆ ಎಂದು ತೇಜ್ ಬಹದ್ದೂರ್ ಅವರ ಫೇಸ್‍ಬುಕ್‍ನಲ್ಲಿ ಸ್ಟೇಟಸ್ ಹಾಕಲಾಗಿದೆ.

ತೇಜ್ ಯಾದವ್ ಅವರ ಫೇಸ್‍ಬುಕ್ ವಿಡಿಯೊಗಳು ಸುದ್ದಿಯಾಗುತ್ತಿದ್ದಂತೆ ಜಮ್ಮು ಕಾಶ್ಮೀರದಲ್ಲಿ ಗಡಿ ಕಾಯುತ್ತಿರುವ ಯೋಧ ಇಷ್ಟೆಲ್ಲಾ ವಿಡಿಯೊ ಅಪ್‍ಲೋಡ್ ಮಾಡಲು ಸಾಧ್ಯವೇ? ಅಲ್ಲಿ ನೆಟ್ವರ್ಕ್ ಸಿಗುತ್ತಾ? ಎಂಬ ಪ್ರಶ್ನೆಗಳೂ ಎದ್ದಿದ್ದವು.

ಈ ಎಲ್ಲ ಪ್ರಶ್ನೆಗಳಿಗೆ ತೇಜ್ ಯಾದವ್ ಅವರ ಫೇಸ್‍ಬುಕ್ ಸ್ಟೇಟಸ್‍ನಿಂದ ಉತ್ತರ ಸಿಕ್ಕಿದಂತಾಗಿದೆ.

ಫೇಸ್‍ಬುಕ್‍ನಲ್ಲಿ Tej Bahadur Yadav ಎಂದು ಸರ್ಚ್ ಮಾಡಿದರೆ ಯೋಧ ಯಾದವ್ ಅವರ ಫೇಸ್‍ಬುಕ್ ಖಾತೆ ತೆರೆದುಕೊಳ್ಳುತ್ತದೆ. ಈ ಫೇಸ್‍ಬುಕ್ ಖಾತೆಯಲ್ಲಿಯೇ ಎರಡು ದಿನಗಳ ಹಿಂದೆ ಯೋಧರಿಗೆ ನೀಡುವ ಕಳಪೆ ಆಹಾರದ ಬಗ್ಗೆ ವಿಡಿಯೊ ಅಪ್‍ಲೋಡ್ ಆಗಿತ್ತು.

ಅದೇ ವೇಳೆ Tej Bahadur Yadav – BSF ಎಂಬ ಪೇಜ್ ಕೂಡಾ ಕ್ರಿಯೇಟ್ ಆಗಿದೆ. ಕಳೆದ 19 ಗಂಟೆಗಳಿಂದ ಈ ಪೇಜ್ ಸಕ್ರಿಯವಾಗಿದೆ. ಇಲ್ಲಿ ತೇಜ್ ಬಹದ್ದೂರ್ ಅವರು ಇದು ನನ್ನ ಪೇಜ್. ಶೇರ್ ಮತ್ತು ಲೈಕ್ ಮಾಡಿ ಎಂದು ಮನವಿ ಮಾಡಿ ವಿಡಿಯೊಗಳನ್ನು ಶೇರ್ ಮಾಡಿದ್ದಾರೆ. ಈ ಖಾತೆಯಲ್ಲಿ ಪತ್ನಿ ಮತ್ತು ಮಗನೊಂದಿಗೆ ಇರುವ ಫೋಟೊ ಶೇರ್ ಮಾಡಿ ದುಷ್ಟರಿಂದ ನನ್ನ ಕುಟುಂಬವನ್ನು ರಕ್ಷಿಸಿ ಎಂದು ಮನವಿ ಮಾಡಲಾಗಿದೆ. ಕಳೆದ ಒಂದು ಗಂಟೆಯಲ್ಲಿ ಹದಿಮೂರು ಪೋಸ್ಟ್ ಗಳು ಈ ಪೇಜ್‍ನಲ್ಲಿ ಅಪ್‍ಡೇಟ್ ಆಗಿವೆ.

ಇನ್ನೊಂದು ಪೇಜ್ -Tej Bahadur Yadav ಎಂಬ ಹೆಸರಿನಲ್ಲಿ ಕ್ರಿಯೇಟ್ ಆಗಿದೆ. ಈ ಪೇಜ್‍ನಲ್ಲಿ ಜನವರಿ 9 ರಂದು ಪ್ರೊಫೈಲ್ ಫೋಟೊ ಅಪ್‍ಲೋಡ್ ಮಾಡಲಾಗಿದ್ದು, ಇಲ್ಲಿಯೂ ವಿಡಿಯೊ ಮತ್ತು ಫೋಟೋಗಳನ್ನು ಶೇರ್ ಮಾಡಲಾಗಿದೆ.

ಈ ಪುಟದಲ್ಲಿ 5 ಗಂಟೆಗಳ ಹಿಂದೆ ಅಪ್‍ಡೇಟ್ ಮಾಡಿದ ಪೋಸ್ಟ್ ನಲ್ಲಿ ಬುದ್ಧಿಜೀವಿಗಳು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಅವರು ಮಾತನಾಡಲಿ. ಆದರೆ ನನಗೆ ಸರಿ ಅನಿಸಿದ್ದನ್ನು ನಾನು ಹೇಳುತ್ತೇನೆ. ನಾನೇನೂ ತಪ್ಪು ಮಾಡಿಲ್ಲ. ನಾನು ಸಹಿಸಿಕೊಂಡು ಇರುವುದೂ ಇಲ್ಲ. ಭಾರತ್ ಮಾತಾ ಕೀ ಜೈ, ಇಂಕ್ವಿಲಾಬ್ ಜಿಂದಾಬಾದ್. ಯೋಚನೆ ಬದಲಾದರೆ ದೇಶವೂ ಬದಲಾಗುತ್ತದೆ. ನನ್ನ ಮಾತುಗಳನ್ನು ಜನರಿಗೆ ತಲುಪಿಸಲು ಸಹಾಯ ಮಾಡಿ ಎಂದು ಬರೆಯಲಾಗಿದೆ. 15 ನಿಮಿಷಗಳ ಹಿಂದೆ ಪತ್ನಿಯೊಂದಿಗಿರುವ ಫೋಟೊ ಅಪ್‍ಲೋಡ್ ಆಗಿದೆ.

ತೇಜ್ ಬಹದ್ದೂರ್ ಅವರ ಹೆಸರಿನಲ್ಲಿರುವ ಈ ಎರಡು ಪೇಜ್‍ಗಳು ಸಕ್ರಿಯವಾಗಿ ಸ್ಟೇಟಸ್ ಅಪ್‍ಡೇಟ್ ಮಾಡುತ್ತಿವೆ. ಈ ಪುಟಗಳಲ್ಲಿ ಕವರ್ ಫೋಟೊ ಬದಲಾಗುತ್ತದೆ. ಸೇನೆಯಲ್ಲಿ ಕಠಿಣ ತರಬೇತಿ ನೀಡಲಾಗುತ್ತಿದೆ. ಆದರೆ ಹೊಟ್ಟೆಗೆ ಆಹಾರ ಸಿಗುತ್ತಿಲ್ಲ ಎಂದು ಒಂದು ಪೇಜ್‍ನಲ್ಲಿ ಸ್ಟೇಟಸ್ ಅಪ್‍ಡೇಟ್ ಆಗಿದೆ. ಮತ್ತೊಂದು ಪೇಜ್‍ನಲ್ಲಿ ತೇಜ್ ಯಾದವ್ ಬಗ್ಗೆ ಇಂಡಿಯಾ ಟೀವಿ ಪ್ರಸಾರ ಮಾಡಿದ ವಿಡಿಯೊ ಲಿಂಕ್‍ನ್ನು ಶೇರ್ ಮಾಡಲಾಗಿದೆ.

Comments are closed.