ರಾಷ್ಟ್ರೀಯ

ಅರ್ನಬ್ ಗೋಸ್ವಾಮಿ ಯಾಕೆ ಕಿರುಚಿ ಮಾತಾನಾಡುತ್ತಾರೆ?

Pinterest LinkedIn Tumblr


ಬೆಂಗಳೂರು(ಜ. 09): ದೇಶದ ಅತ್ಯಂತ ಖ್ಯಾತ ಟಿವಿ ಸುದ್ದಿ ನಿರೂಪಕರೆನಿಸಿರುವ ಅರ್ನಬ್ ಗೋಸ್ವಾಮಿ ತಮ್ಮ ದಿಟ್ಟ ಮಾತುಗಳಿಗೆ ಹೆಸರುವಾಸಿ. ಗಟ್ಟಿ ಧ್ವನಿಯಲ್ಲಿ ಮಾತನಾಡುವುದು ಅರ್ನಬ್ ಸ್ಪೆಷಾಲಿಟಿಗಳಲ್ಲೊಂದು. ಪ್ಯಾನೆಲ್’ನಲ್ಲಿ ಎಂಥವರೇ ಇದ್ದರೂ ಇವರ ಅಬ್ಬರಕ್ಕೇ ಹೆಚ್ಚು ಮೆರಗು. ಇಂಥ ಅರ್ನಬ್ ಗೋಸ್ವಾಮಿ ನಿನ್ನೆ ಬೆಂಗಳೂರಿನಲ್ಲಿ ಸುವರ್ಣನ್ಯೂಸ್’ನ ಸೋದರ ಸಂಸ್ಥೆ ಏಷ್ಯಾನೆಟ್ ನ್ಯೂಸೆಬಲ್ ಆಯೋಜಿಸಿದ್ದ ಅಂಡರ್-25 ಶೃಂಗಸಭೆಯಲ್ಲಿ ಪಾಲ್ಗೊಂಡು ಅನೇಕ ವಿಚಾರಗಳನ್ನು ಹಂಚಿಕೊಂಡರು. ತಾವು ಚರ್ಚಾ ಕಾರ್ಯಕ್ರಮದಲ್ಲಿ ಜೋರಾಗಿ ಯಾಕೆ ಕಿರಿಚುತ್ತೇನೆಂಬುದಕ್ಕೆ ಕಾರಣವನ್ನೂ ಕೊಟ್ಟರು. ಗಟ್ಟಿಯಾಗಿ ಮಾತನಾಡದಿದ್ದರೆ ಯಾರೂ ಕೂಡ ಮಾತನ್ನ ಕೇಳುವುದಿಲ್ಲ. ನಿಮ್ಮ ಮಾತು ತಲುಪಬೇಕಾದರೆ ಕಿರುಚಿ ಮಾತನಾಡುವುದು ಅನಿವಾರ್ಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪತ್ರಿಕೋದ್ಯಮದಲ್ಲಿ ಪತ್ರಕರ್ತರಿಗೆ ಎರಗಿ ಬರುವ ಸವಾಲಿನ ಬಗ್ಗೆ ಮಾತನಾಡಿದ ಅರ್ನಬ್ ಗೋಸ್ವಾಮಿ, ಪತ್ರಕರ್ತರು ಸರಿ ಮತ್ತು ತಪ್ಪು ದಾರಿಗಳನ್ನು ಸ್ಪಷ್ಟವಾಗಿ ಗುರುತಿಸುವ ಕ್ಷಮತೆ ಹೊಂದಿರಬೇಕು. ಯಾವುದೇ ರಾಜಕೀಯ ಪಕ್ಷವಾದರೂ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯಾದರೂ ತಪ್ಪು ದಾರಿ ಇದ್ದರೆ ಅದಕ್ಕೆ ಬೆಂಬಲ ಕೊಡಬಾರದು. ಸರಿ ಎನಿಸಿದರೆ ಯಾರೇ ಆದರೂ ಅದನ್ನು ಬೆಂಬಲಿಸುವ ಜವಾಬ್ದಾರಿ ಪತ್ರಕರ್ತನದ್ದು ಎಂದು ಕಿವಿ ಮಾತು ಹೇಳೀದರು.
ಲೈಂಗಿಕ ದೌರ್ಜನ್ಯದ ವಿರುದ್ಧ ಗುಡುಗು:
ಬೆಂಗಳೂರಿನಲ್ಲಿ ಡಿ.31ರ ಮಧ್ಯರಾತ್ರಿ ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಘಟನೆಯನ್ನು ಪ್ರಸ್ತಾಪಿಸಿದ ಅರ್ನಬ್ ಗೋಸ್ವಾಮಿ, ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಘಟನೆಯ ಬಗ್ಗೆ ರಾಜ್ಯದ ಗೃಹ ಸಚಿವ ಜಿ.ಪರಮೇಶ್ವರ್ ತೀರಾ ಹಗುರವಾಗಿ ಮಾತನಾಡಿದ್ದಾರೆಂದು ಅರ್ನಬ್ ಬಲವಾಗಿ ಖಂಡಿಸಿದ್ದಾರೆ. ಅಲ್ಲದೇ, ಘಟನೆಯು ಇಡೀ ದೇಶದ ಮಾನ ಹರಾಜಾಕುತ್ತಿದ್ದರೂ ಮಾಧ್ಯಮಗಳ ಧ್ವನಿ ಕ್ಷೀಣಿಸಿದ್ದರ ಬಗ್ಗೆಯೂ ಅವರು ಬೇಸರಪಟ್ಟಿದ್ದಾರೆ.
ಇದೇ ವೇಳೆ, ಅರ್ನಬ್ ಗೋಸ್ವಾಮಿ ಅವರು “ರಿಪಬ್ಲಿಕ್” ಎಂಬ ಹೊಸ ಇಂಗ್ಲೀಷ್ ಸುದ್ದಿ ವಾಹಿನಿ ಆರಂಭಿಸುತ್ತಿದ್ದಾರೆ. ರಾಜಕೀಯ ವ್ಯಕ್ತಿಗಳಿಂದ ಮುಕ್ತವಾದ ಹಾಗೂ ಯುವ ಜನತೆಗೆ ನಿಜವಾದ ಪತ್ರಿಕೋದ್ಯಮದ ರುಚಿ ಕೊಡುವ ವಾಹಿನಿಯನ್ನು ತಾನು ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಅರ್ನಬ್ ನೇತೃತ್ವದಲ್ಲಿ ರಿಪಬ್ಲಿಕ್ ಸುದ್ದಿ ವಾಹಿನಿ ಆರಂಭವಾಗಲಿದೆ.

Comments are closed.