ರಾಷ್ಟ್ರೀಯ

ಮಹಿಳೆಯರನ್ನು ವಿವಸ್ತ್ರಗೊಳಿಸಿ, ಥಳಿಸಿದ ಶಿವಾಜಿ ’ಭಕ್ತರು’: ಸಂತ್ರಸ್ತ ಮಹಿಳೆಯಿಂದ ದೂರು

Pinterest LinkedIn Tumblr


ಪುಣೆ: ಮಹಾರಾಷ್ಟ್ರದ ಲೋನವಾಲದಲ್ಲಿರುವ ವಿಸಾಪುರ ಕೋಟೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ವಿವಾಹಿತರ ಗುಂಪಿನ ಮೇಲೆ ಸ್ವಯಂ ಘೋಷಿತ ಶಿವಾಜಿ ಮಹಾರಾಜ್ ‘ಭಕ್ತರು’ ದಾಳಿ ನಡೆಸಿದ್ದು ಮಹಿಳೆಯರು ಮತ್ತು ಮಕ್ಕಳನ್ನು ವಿವಸ್ತ್ರಗೊಳಿಸಿ ಥಳಿಸಿರುವ ಘಟನೆ ವರದಿಯಾಗಿದೆ.

ಈ ಸಂಬಂಧ ಮುಂಬೈ ಮೂಲದ ಶಾಲಿನಿ ಪಲ್ಲವ್ ಜಾಲಾ (36) ಎಂಬ ಮಹಿಳೆ ಲೋನವಾಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಘಟನೆಯ ಹಿನ್ನೆಲೆ: ಫಿಟ್‌ನೆಸ್‌ ತರಬೇತಿ ನೀಡುವ ಶಾಲಿನಿ ಹೊಸ ವರ್ಷದ ನಿಮಿತ್ತ ತನ್ನ ಕುಟುಂಬಸ್ಥ ಗೆಳೆಯರ ಜೊತೆ ಇಲ್ಲಿನ ವಿಸಾಪುರ ಕೋಟೆಗೆ ಒಂದು ದಿನದ ಟ್ರಕ್ಕಿಂಗ್‌ ಪ್ರವಾಸವನ್ನು ಆಯೋಜಿಸಿದ್ದರು. ಈ ಟ್ರಕ್ಕಿಂಗ್‌ನಲ್ಲಿ ಸುಮಾರು 40 ದಂಪತಿಗಳು ಮತ್ತು ಚಿಕ್ಕ ಮಕ್ಕಳು ಭಾಗವಹಿಸಿದ್ದರು.

ಶಾಲಿನಿ ತಂಡ ಡಿಸೆಂಬರ್ 31ರ ಮಧ್ಯಾಹ್ನ ವಿಸಾಪುರ ಕೋಟೆ ತಲುಪಿದೆ. ನಂತರ ಊಟ ಮಾಡಿ ಕ್ರಿಕೆಟ್ ಆಟವಾಡಿದ್ದಾರೆ. ಸಂಜೆ ವಿಶ್ರಾಂತಿ ಪಡೆಯುತ್ತಿರುವಾಗ ಕೇಸರಿ ಭಾವುಟಗಳನ್ನು ಹಿಡಿದಿದ್ದ 6 ಜನ ಯುವತಿಯರು ‘ ಜೈ ಶಿವಾಜಿ’, ಜೈ ‘ಭವಾನಿ’ ಎಂಬ ಘೋಷಣೆಗಳನ್ನು ಕೂಗುತ್ತ ಶಾಲಿನಿ ಮತ್ತು ಗೆಳೆಯರಿದ್ದ ಕಡೆ ಬಂದಿದ್ದಾರೆ. ನಂತರ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ನೀವು ಪಾನ ಮತ್ತರಾಗಿದ್ದು, ಡ್ರಗ್ಸ್ ಸೇವಿಸಿದ್ದೀರಿ ಎನ್ನುತ್ತ ಮಹಿಳೆಯರ ಮೇಲೆ ದಾಳಿ ನಡೆಸಿದ್ದಾರೆ.

ಮದುವೆಯಾದರೆ ಏನಿವಾಗ?
ಇದೇ ವೇಳೆ 15 ಜನ ಯುವಕರ ಗುಂಪು ಆಗಮಿಸಿ ಶಾಲಿನಿ ತಂಡದವರ ಮೇಲೆ ದಾಳಿ ಮಾಡಲು ಮುಂದಾಗಿದೆ. ಆಗ ಶಾಲಿನಿ, ನಾವು ಕುಟುಂಬಸ್ಥರು, ನಮಗೆಲ್ಲ ಮದುವೆಯಾಗಿದೆ, ಮಕ್ಕಳು ಇದ್ದಾರೆ, ಪ್ಯಾಮಿಲಿ ಟ್ರಿಪ್ ಬಂದಿದ್ದೇವೆ ಎಂದು ಹೇಳಿದರೂ ಕೇಳದ ಆ ಗುಂಪು ಮದುವೆಯಾದರೆ ಏನಿವಾಗ ಎನ್ನುತ್ತ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಕೆಲ ಮಹಿಳೆಯರು ಮತ್ತು ಮಕ್ಕಳನ್ನು ವಿವಸ್ತ್ರಗೊಳಿಸಿ ಥಳಿಸಿದ್ದಾರೆ. ಶಾಲಿನಿ ಅವರ ಬಲಗೈ ಮುರಿದಿದ್ದಾರೆ. ಈ ವೇಳೆ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಶಾಲಿನಿ ಮತ್ತು ಅವರ ಗೆಳೆಯರನ್ನು ರಕ್ಷಣೆ ಮಾಡಿದ್ದಾರೆ.

ಶಾಲಿನಿ, 15 ಜನ ಯುವಕರು ಮತ್ತು 6 ಯುವತಿಯರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಲೋನವಾಲ್ ಪೊಲೀಸರು ಘಟನೆ ಸಂಬಂಧ ತನಿಖೆ ಆರಂಭಿಸಿದ್ದಾರೆ.

Comments are closed.