ರಾಷ್ಟ್ರೀಯ

ರಾಜ್ಯದ ಬರಕ್ಕೆ ಕೇಂದ್ರದಿಂದ 1782 ಕೋಟಿ ರೂ. ನೆರವು

Pinterest LinkedIn Tumblr


ನವದೆಹಲಿ, ಜ. ೫- ಸತತ ಭೀಕರ ಬರಗಾಲದಿಂದ ತತ್ತರಿಸಿರುವ ಕರ್ನಾಟಕದಲ್ಲಿ ಪರಿಹಾರ ಕಾಮಗಾರಿಗಳಿಗಾಗಿ 1782.44 ಕೋಟಿ ರೂಪಾಯಿ ನೆರವು ನೀಡಲು ಕೇಂದ್ರ ಸರ್ಕಾರ ಇಂದು ಸಮ್ಮತಿಸಿದೆ.

ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬರಪರಿಹಾರ ಕಾಮಗಾರಿಗಳಿಗಾಗಿ 4702 ಕೋಟಿ ರೂ. ನೆರವು ನೀಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ವಪಕ್ಷಗಳ ನಿಯೋಗ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿತ್ತು. ಇದಕ್ಕೂ ಮುನ್ನ ರಾಜ್ಯದ ವಿವಿಧ ಸಚಿವರು ದೆಹಲಿಗೆ ತೆರಳಿ ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ನೆರವಿಗಾಗಿ ಮನವಿ ಮಾಡಿದ್ದರು.

ಮೋದಿ ಅವರ ಸೂಚನೆಯಂತೆ ಪ್ರಕೃತಿ ವಿಕೋಪ ಪರಿಹಾರ ಕುರಿತ ರಾಜನಾಥ್ ಸಿಂಗ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಇಂದು ಸಭೆ ಸೇರಿ ರಾಜ್ಯಕ್ಕೆ ಆರ್ಥಿಕ ನೆರವು ಬಿಡುಗಡೆ ಮಾಡುವ ಕುರಿತು ತೀರ್ಮಾನಿಸಿದೆ. ಸಮಿತಿ ನಿನ್ನೆಯೇ ಸಭೆ ಸೇರಬೇಕಾಗಿತ್ತಾದರೂ, ಕಾರಣಾಂತರಗಳಿಂದ ಇಂದಿಗೆ ಮುಂದೂಡಲಾಗಿತ್ತು.

ಕಳೆದ 2-3 ವರ್ಷಗಳಿಂದ ರಾಜ್ಯದಲ್ಲಿ ತೀವ್ರ ಬರಗಾಲ ಎದುರಾಗಿದೆ. ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ. ಮುಂಗಾರು ಬೆಳೆ ಕೈಕೊಟ್ಟಿದ್ದರಿಂದ ಸುಮಾರು 12 ಸಾವಿರ ಕೋಟಿ ರೂ. ಮೌಲ್ಯದ ಬೆಳೆನಷ್ಟ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರಾಜ್ಯದ ನೆರವಿಗೆ ಬರಬೇಕು ಎಂದು ರಾಜ್ಯ ಸರ್ಕಾರ ಮನವಿ ಮಾಡಿತ್ತು. ಇದಾದ ಬಳಿಕ ಕೇಂದ್ರದ ಬರ ಅಧ್ಯಯನ ತಂಡ ರಾಜ್ಯದ 15 ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಭೀಕರತೆಯನ್ನು ಖುದ್ದಾಗಿ ಪರಿಶೀಲಿಸಿತ್ತು. ನಂತರ ಕೇಂದ್ರಕ್ಕೆ ವರದಿ ಸಲ್ಲಿಸಿತ್ತು.

Comments are closed.