ರಾಷ್ಟ್ರೀಯ

ನೋಟ್ ನಿಷೇಧವಾದ 48 ಗಂಟೆಯಲ್ಲಿ 4 ಸಾವಿರ ಕೆಜಿ ಚಿನ್ನ ಮಾರಾಟ!

Pinterest LinkedIn Tumblr

gold
ನವದೆಹಲಿ: 500, 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ನವೆಂವೆರ್ 8 ರಂದು ನಿಷೇಧಿಸಿದ ಬಳಿಕ ಕಾಳಧನಿಕರು ಚಿನ್ನದ ಮೇಲೆ ಹೂಡಿಕೆ ಮಾಡಿದ್ದಾರೆ ಎನ್ನುವುದು ನಿಮಗೆ ಗೊತ್ತೆ ಇದೆ. ಆದರೆ ಈಗ ಸಿಕ್ಕಿರುವ ಮಾಹಿತಿ ಪ್ರಕಾರ ನೋಟ್ ಬ್ಯಾನ್ ಆದ ಕೇವಲ 48 ಗಂಟೆಯಲ್ಲಿ ಒಟ್ಟು 4 ಸಾವಿರ ಕೆಜಿಗೂ ಹೆಚ್ಚು ಚಿನ್ನ ಮಾರಾಟವಾಗಿದೆ.

ಹೌದು. ಕೇಂದ್ರ ಅಬಕಾರಿ ಗುಪ್ತಚರ ಮಹಾ ನಿರ್ದೇಶನಾಲಯ (ಡಿಜಿಸಿಇಐ) ದೇಶದ ಎಲ್ಲ ಜುವೆಲ್ಲರಿಗಳ ವಹಿವಾಟು ಲೆಕ್ಕ ಹಾಕಿ ಈ ಮಾಹಿತಿಯನ್ನು ನೀಡಿದ್ದು, ಒಟ್ಟು 1,250 ಕೋಟಿ ರೂಗಿಂತಲೂ ಅಧಿಕ ವ್ಯಾಪಾರ ನಡೆದಿದೆ ಎಂದು ಹೇಳಿದೆ.

ನವೆಂಬರ್ 8ರ ದೇಶದಲ್ಲಿ 2 ಸಾವಿರ ಕೆಜಿಗೂ ಅಧಿಕ ಚಿನ್ನ ಮಾರಾಟವಾಗಿದ್ದು, ಒಂದೇ ದಿನ ಇಷ್ಟೊಂದು ಪ್ರಮಾಣದ ಚಿನ್ನ ಮಾರಾಟವಾಗಿರುವುದು ಇದೇ ಮೊದಲು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯ ಪ್ರಮುಖ ಜ್ಯುವೆಲ್ಲರಿಯೊಂದು ನವೆಂಬರ್ 700 ಜನರಿಗೆ ಒಟ್ಟು 45 ಕೆಜಿ ಚಿನ್ನವನ್ನು ಮಾರಾಟ ಮಾಡಿದ್ದರೆ, ನವೆಂಬರ್ 7 ರಂದು ಕೇವಲ 820 ಗ್ರಾಂ ಚಿನ್ನವನ್ನು ಮಾರಾಟ ಮಾಡಿತ್ತು.

ಚೆನ್ನೈನ ಲಲಿತಾ ಜ್ಯುವೆಲ್ಲರಿ ನ.8ರಂದು 200 ಕೆಜಿ ಚಿನ್ನವನ್ನು ಮಾರಾಟ ಮಾಡಿದ್ದರೆ, ಹಿಂದಿನ ದಿನ 40 ಕೆಜಿ ಚಿನ್ನವನ್ನು ಮಾರಾಟ ಮಾಡಿತ್ತು. 400 ಜ್ಯುವೆಲ್ಲರಿ ಅಂಗಡಿಗಳಿಂದ 20 ಕೋಟಿ ರೂ. ವ್ಯವಹಾರ ನಡೆದಿದ್ದು, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೆರಿಗೆಯನ್ನು ತಪ್ಪಿಸಿ ವ್ಯವಹಾರ ನಡೆಸಿದ ಸಂಬಂಧ ಡಿಜಿಸಿಇಐ ಈಗಾಗಲೇ 300 ಜ್ಯುವೆಲ್ಲರಿ ಅಂಗಡಿಗಳಿಗೆ ನೋಟ್ ಜಾರಿ ಮಾಡಿದೆ.

500, 1 ಸಾವಿರ ರೂ. ಮುಖಬೆಲೆಯ ನೋಟ್ ನಿಷೇಧವಾದ ಬಳಿಕ ಭರ್ಜರಿ ವ್ಯಾಪಾರ ನಡೆಸಿದ ಬೆಂಗಳೂರಿನ 7 ಜ್ಯುವೆಲ್ಲರಿ ಅಂಗಡಿಗಳ ಮೇಲೆ ಕರ್ನಾಟಕ ಮತ್ತು ಗೋವಾದ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಡಿಸೆಂಬರ್ 23ರಂದು ದಾಳಿ ಮಾಡಿದ್ದರು. ಈ ಜ್ಯುವೆಲ್ಲರಿಗಳ ನೋಟ್ ಬ್ಯಾನ್ ಆದ ಬಳಿಕದ ಅವಧಿಯ ವ್ಯಾಪಾರ ಕಳೆದ ವರ್ಷದ ಅಕ್ಟೋಬರ್, ನವೆಂಬರ್‍ಗೆ ಹೋಲಿಸಿದರೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಒಟ್ಟು 47.74 ಅಕ್ರಮ ವಹಿವಾಟು ನಡೆದಿದೆ ಎಂದು ಆದಾಯ ತೆರಿಗೆ ಇಲಾಖೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿತ್ತು.

2 ಲಕ್ಷಕ್ಕಿಂತ ಹೆಚ್ಚಿನ ವ್ಯಾಪಾರ ನಡೆಸಬೇಕಾದರೆ ಪಾನ್ ಕಾರ್ಡ್ ಕಡ್ಡಾಯವಾದ ಹಿನ್ನೆಲೆಯಲ್ಲಿ ಜ್ಯುವೆಲ್ಲರಿಗಳು 2 ಲಕ್ಷ ರೂ.ಗಿಂತ ಕಡಿಮೆ ಮೊತ್ತದಲ್ಲಿ ಬಹಳಷ್ಟು ವಹಿವಾಟು ನಡೆಸಿವೆ. ಪಾನ್ ಇಲ್ಲದೇ ವಹಿವಾಟು ನಡೆದಿರುವ ಕಾರಣ ಯಾವ ವ್ಯಕ್ತಿ ಎಷ್ಟು ಚಿನ್ನವನ್ನು ಖರೀದಿಸಿದ್ದಾರೆ ಎನ್ನುವ ಅಧಿಕೃತ ಮಾಹಿತಿ ಸಿಕ್ಕುತ್ತಿಲ್ಲ. ಅಷ್ಟೇ ಅಲ್ಲದೇ ನಕಲಿ ವ್ಯಕ್ತಿಗಳ ಹೆಸರಿನಲ್ಲಿ ಬಿಲ್ ಮಾಡಲಾಗಿದೆ. ಇದೇ ವೇಳೆ ಕೆಲ ಜ್ಯುವೆಲ್ಲರಿಗಳು ಈ ಹಿಂದಿನ ದಿನಾಂಕದಲ್ಲಿ ಬಿಲ್ ಮಾಡಿ ಚಿನ್ನವನ್ನು ಮಾರಾಟ ಮಾಡಿರುವುದು ಬೆಳಕಿಗೆ ಬಂದಿತ್ತು.

Comments are closed.