ರಾಷ್ಟ್ರೀಯ

2016ರ ದೇಶದ ಟಾಪ್ 10 ಸುದ್ದಿಗಳು

Pinterest LinkedIn Tumblr
Sasikala Natarajan, left standing, a close friend of India's Tamil Nadu state former Chief Minister Jayaram Jayalalithaa, wipes her tears next to Jayalalithaa's body wrapped in the national flag and kept for public viewing outside an auditorium in Chennai, India, Tuesday, Dec. 6, 2016. Jayalalithaa, the hugely popular south Indian actress who later turned to politics and became the highest elected official in the state of Tamil Nadu, died Monday. She was 68. (AP Photo/Aijaz Rahi)
Sasikala Nata

1) ನೋಟ್ ಬ್ಯಾನ್:
ಈ ವರ್ಷ ದೇಶದಲ್ಲೆ ಭಾರೀ ಸಂಚಲನ ಮೂಡಿಸಿದ ವಿಚಾರ. ನವೆಂಬರ್ 8ರ ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ 500, 1 ಸಾವಿರ ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದರು. ಈ ನಿರ್ಧಾರದ ಪರ, ವಿರೋಧ ಚರ್ಚೆ ನಡೆಯುತ್ತಿದ್ದು ಈಗಾಗಲೇ 50 ದಿನ ಪೂರ್ಣಗೊಂಡಿದೆ. ಈ ನಿರ್ಧಾರದಿಂದ ಕಂಗೆಟ್ಟ ಕಪ್ಪು ಕುಳಗಳು ನೋಟ್‍ಗಳನ್ನು ಬದಲಾಯಿಸಿಕೊಂಡಿದ್ದು ದೇಶದೆಲ್ಲಡೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಆಸ್ತಿಗಳನ್ನು ಪತ್ತೆ ಹಚ್ಚುತ್ತಿದ್ದಾರೆ. ತನಿಖೆ ವೇಳೆ ಬ್ಯಾಂಕ್ ಮತ್ತು ಆರ್‍ಬಿಐ ಅಧಿಕಾರಿಗಳು ಬ್ಲಾಕ್ ಆಂಡ್ ವೈಟ್ ದಂಧೆಯಲ್ಲಿ ಭಾಗಿಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಕಲಾಪದಲ್ಲಿ ಪ್ರಧಾನಿ ಮೋದಿ ಮಾತನಾಡಬೇಕು ಎಂದು ಆಗ್ರಹಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸಿದರೆ, ಕೇಂದ್ರ ಸರ್ಕಾರ ನೋಟ್ ಬ್ಯಾನ್ ಚರ್ಚೆಗೆ ನಾವು ಸಿದ್ಧ ಪ್ರತಿಪಕ್ಷಗಳು ಅವಕಾಶ ನೀಡುತ್ತಿಲ್ಲ ಎಂದು ಹೇಳುತ್ತಿದೆ. ಇವರಿಬ್ಬರ ಜಟಾಪಟಿಯಿಂದಾಗಿ ಡಿಸೆಂಬರ್‍ನ ಸಂಸತ್ ಕಲಾಪ ಸಂಪೂರ್ಣವಾಗಿ ಬಲಿ ಆಯ್ತು.

2) ಸರ್ಜಿಕಲ್ ಸ್ಟ್ರೈಕ್:
ಪಠಾಣ್‍ಕೋಟ್ ಮತ್ತು ಉರಿ ದಾಳಿ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದ ಒಳಗಡೆ ನುಗ್ಗಿ ಉಗ್ರರನ್ನು ಹತ್ಯೆ ಮಾಡಿತ್ತು. ಸೆ.29ರಂದು ಭಾರತದ 150 ಮಂದಿಯ ಪ್ಯಾರಾ ಕಮಾಂಡೋಗಳು ಪಿಓಕೆ ಒಳಗಡೆ ನುಗ್ಗಿ ಉಗ್ರರ ಲಾಂಚ್ ಪ್ಯಾಂಡ್‍ಗಳನ್ನು ಧ್ವಂಸ ಮಾಡಿತ್ತು. 2ಕಿ.ಮೀ ಗಡಿ ನಿಯಂತ್ರಣ ರೇಖೆಯನ್ನು ದಾಟಿ ನಡೆಸಿದ ಈ ದಾಳಿಯಲ್ಲಿ ಸುಮಾರು 38 ಉಗ್ರರು ಹತ್ಯೆಯಾಗಿದ್ದರು. ಸರ್ಜಿಕಲ್ ದಾಳಿ ನಡೆಸಿದ ಬಳಿಕ ಭಾರತದ ಡಿಜಿಎಂಓ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರೆ ಇದಕ್ಕೆ ಉತ್ತರವಾಗಿ ಪಾಕಿಸ್ತಾನ ಸರ್ಕಾರ ವಿದೇಶಿ ಮಾಧ್ಯಮಗಳಿಗೆ ದಾಳಿ ನಡೆದೇ ಇಲ್ಲ ಎಂದು ತೋರಿಸುವ ಪ್ರಯತ್ನ ನಡೆಸಿತ್ತು. ಇತ್ತ ಭಾರತದಲ್ಲಿ ಎನ್‍ಡಿಎ ಸರ್ಕಾರ ಇದೇ ಮೊದಲ ಬಾರಿಗೆ ಸರ್ಜಿಕಲ್ ಸ್ಟ್ರೈಕ್ ನಡೆದಿದೆ ಎಂದು ಹೇಳಿದ್ದರೆ, ಕಾಂಗ್ರೆಸ್ ತಮ್ಮ ಅವಧಿಯಲ್ಲೂ ಈ ರೀತಿಯ ದಾಳಿ ನಡೆಸಿತ್ತು ಎಂದು ಹೇಳಿತ್ತು.

3) ಪಠಾಣ್‍ಕೋಟ್ ಮತ್ತು ಉರಿ ದಾಳಿ:
ಜನವರಿ 2ರಂದು ಪಂಜಾಬ್‍ನಲ್ಲಿರುವ ಪಠಾಣ್‍ಕೋಟ್ ವಾಯುನೆಲದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಒಟ್ಟು ಮೂರು ದಿನಗಳ ಕಾಲ ನಡೆದ ಈ ಕಾರ್ಯಚರಣೆಯಲ್ಲಿ 7 ಮಂದಿ ಭದ್ರತಾ ಸಿಬ್ಬಂದಿ ಹುತಾತ್ಮರಾಗಿದ್ದರೆ, 6 ಮಂದಿ ಉಗ್ರರನ್ನು ಹತ್ಯೆಗೈಯಲಾಗಿತ್ತು. ಭಾರತ ಆರೋಪಿಸಿದ ಹಿನ್ನಲೆಯಲ್ಲಿ ಪಾಕಿಸ್ತಾನದ ತನಿಖಾ ತಂಡವೂ ಭಾರತಕ್ಕೆ ಬಂದಿತ್ತು. ಆದರೆ ಇಸ್ಲಾಮಾಬಾದ್‍ಗೆ ತೆರಳಿದ ಬಳಿಕ ಭಾರತ ತನಿಖೆಗೆ ಸಹಕಾರ ನೀಡಲಿಲ್ಲ ಎಂದು ಆರೋಪಿಸಿತು. ಇದೀಗ ರಾಷ್ಟ್ರೀಯ ತನಿಖಾ ದಳ ಈ ಪ್ರಕರಣದ ತನಿಖೆ ನಡೆಸಿ ಚಾರ್ಜ್‍ಶೀಟ್ ಸಲ್ಲಿಸಿದೆ.

ಸೆ.18ರಂದು ಉಗ್ರರು ಉರಿ ಸೇನಾ ಕಚೇರಿ ಮೇಲೆ ದಾಳಿ ನಡೆಸಿದ್ದರು. ಉಗ್ರರೊಂದಿಗಿನ ಕಾದಾಟದಲ್ಲಿ 19 ಮಂದಿ ಸೈನಿಕರು ಹುತಾತ್ಮರಾಗಿದ್ದರೆ, 4 ಮಂದಿ ಉಗ್ರರನ್ನು ಹತ್ಯೆಗೈಯಲಾಗಿತ್ತು. ಪಠಾಣ್‍ಕೋಟ್ ಮತ್ತು ಉರಿ ಮೇಲಿನ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರರನ್ನು ಹತ್ಯೆ ಮಾಡಿತ್ತು.

4) ಕಾಶ್ಮೀರ ಹಿಂಸಾಚಾರ:
ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಬುರ್ಹಾನ್ ವಾನಿಯನ್ನು ಭಾರತೀಯ ಸೇನಾ ಪಡೆ ಕಾರ್ಯಾಚರಣೆ ನಡೆಸಿ ಜುಲೈ 8 ರಂದು ಹತ್ಯೆ ನಡೆಸಿತ್ತು. ಹತ್ಯೆಯನ್ನು ಖಂಡಿಸಿ ಪ್ರತ್ಯೇಕವಾದಿಗಳು ಪ್ರತಿಭಟನೆಯಿಂದಾಗಿ 53 ದಿನಗಳ ಕಾಲ ಕಾಶ್ಮೀರ ಕಣಿವೆಯಲ್ಲಿ ಕಫ್ರ್ಯೂ ಹೇರಲಾಗಿತ್ತು. ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿಸಿದ್ದಕ್ಕೆ ಪ್ರತಿಯಾಗಿ ಪೆಲೆಟ್ ಗನ್ ಬಳಸಿ ನಿಯಂತ್ರಿಸುತ್ತಿದ್ದರು. ಅಂತಿಮವಾಗಿ 133 ದಿನಗಳ ಬಳಿಕ ಕಾಶ್ಮೀರ ಕಣಿವೆ ಸಹಜ ಸ್ಥಿತಿಯತ್ತ ಬಂದಿತ್ತು. ನೋಟ್ ಬ್ಯಾನ್ ನಿರ್ಧಾರದಿಂದಾಗಿಯೇ ಕಾಶ್ಮೀರದಲ್ಲಿ ಹಿಂಸಾಚಾರ ನಿಂತಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು.

5) ಜಿಯೋ ಡೇಟಾಗಿರಿ:
ಇಲ್ಲಿಯವರೆಗೆ ಕರೆ ವಿಚಾರದ ಬಗ್ಗೆ ದರ ಸಮರ ಆರಂಭವಾಗಿತ್ತು. ಆದರೆ ರಿಲಯನ್ಸ್ ಇಂಡಸ್ಟ್ರೀಸ್ ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಬಂದ ಬಳಿಕ ಡೇಟಾಗಿರಿ ಆರಂಭವಾಗಿದೆ. ಸೆ.5ರಂದು ಅಧಿಕೃತವಾಗಿ ಜಿಯೋ ಸೇವೆಯನ್ನು ಬಿಡುಗಡೆಗೊಳಿಸಿದ ಮುಕೇಶ್ ಅಂಬಾನಿ 90 ದಿನಗಳ ಕಾಲ ಉಚಿತ ಡೇಟಾ ನೀಡುವುದಾಗಿ ಹೇಳಿದರು. ಈ ಆಫರ್ ನೀಡಿದ್ದೆ ತಡ ಉಳಿದ ಟೆಲಿಕಾಂ ಕಂಪೆನಿಗಳು ಡೇಟಾ ಪ್ಯಾಕ್ ನಲ್ಲಿ ದರ ಸಮರ ಆರಂಭಿಸಿತು. ಈಗ ಜಿಯೋ ಮಾರ್ಚ್ 31ರವರೆಗೂ ಉಚಿತ ಈ ಆಫರ್ ಅವಧಿಯನ್ನು ವಿಸ್ತರಿಸಿದೆ.

6) ಜಯಲಲಿತಾ ನಿಧನ:
ಸೆ.22 ರಂದು ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಡಿಸೆಂಬರ್ 5ರಂದು ಮೃತಪಟ್ಟರು. ತಮಿಳುನಾಡು ಸರ್ಕಾರ 75 ದಿನಗಳ ಕಾಲ ಜಯಾ ಆರೋಗ್ಯದ ಮಾಹಿತಿಯನ್ನು ಗೌಪ್ಯವಾಗಿಟ್ಟುಕೊಂಡಿತ್ತು. ಹೀಗಾಗಿ ಜಯಲಲಿತಾಗೆ ಏನಾಗಿದೆ ಎನ್ನುವ ಮಾಹಿತಿಯೇ ಸಿಕ್ಕಿರಲಿಲ್ಲ. ಡಿಸೆಂಬರ್ 5ರ ಮಧ್ಯರಾತ್ರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಪನ್ನೀರ್ ಸೆಲ್ವಂ ಪ್ರಮಾಣ ವಚನ ಸ್ವೀಕರಿಸಿದರು. ಜಯಲಲಿತಾ ಚಿಕಿತ್ಸೆಗೆ ಎಷ್ಟು ರೂ. ಖರ್ಚಾಗಿದೆ ಎನ್ನುವ ಮಾಹಿತಿಯೂ ಲಭ್ಯವಾಗಿಲ್ಲ. ಈಗ ಜಯಾ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ಹೈಕೋರ್ಟ್‍ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿದೆ.

7) ರೋಹಿತ್ ವೆಮುಲಾ ಆತ್ಮಹತ್ಯೆ, ಜೆಎನ್‍ಯು ವಿವಾದ:
ಹೈದರಾಬಾದ್ ಕೇಂದ್ರಿಯ ವಿವಿಯ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೆಮುಲಾ ಜನವರಿ 17ರಂದು ಹಾಸ್ಟೇಲ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ರೋಹಿತ್ ಸಾವಿಗೆ ವಿವಿ ಮತ್ತು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಕಾರಣ ಎಂದು ಆರೋಪಿಸಿ ದಲಿತ ಸಂಘಟನೆಗಳು, ವಿದ್ಯಾರ್ಥಿಗಳು ಸಂಘಟನೆ ಪ್ರತಿಭಟನೆಗೆ ಕಾಂಗ್ರೆಸ್ ಮತ್ತು ಆಪ್ ಬೆಂಬಲ ನೀಡಿದ ಕಾರಣ ದೇಶವ್ಯಾಪಿ ಚರ್ಚೆಗೆ ಕಾರಣವಾಗಿತ್ತು. ಈ ಘಟನೆ ಚರ್ಚೆ ಆಗುತ್ತಿರುವ ಬೆನ್ನಲ್ಲೆ ದೆಹಲಿಯ ಜೆಎನ್‍ಯು ವಿವಿ ವಿದ್ಯಾರ್ಥಿ ಸಂಘಟನೆಯ ನಾಯಕ ಕನ್ಹಯ್ಯ ಕುಮಾರ್ ಮತ್ತು ಇತರರ ಮೇಲೆ ದೇಶದ್ರೋಹದ ಪ್ರಕರಣ ದಾಖಲಾಯಿತು. ಅಫ್ಜಲ್ ಗುರು ಬೆಂಬಲಿಸಿ ಕಾರ್ಯಕ್ರಮ ನಡೆಸಿದಿದ್ದಾರೆ ಎಂದು ಆರೋಪಿಸಿ ಎಬಿವಿಪಿ ದೇಶದಲ್ಲೆಡೆ ಪ್ರತಿಭಟನೆ ನಡೆಸಿತು. ಲೋಕಸಭೆಯಲ್ಲಿ ಈ ಎರಡು ವಿಚಾರಗಳಿಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಚರ್ಚೆಯ ವೇಳೆ ಮಾನವ ಸಂಪನ್ಮೂಲ ಸಚಿವೆ ಸ್ಮøತಿ ಇರಾನಿ ಲೋಕಸಭೆಯಲ್ಲಿ ಮಾಡಿದ ಭಾಷಣ ವೈರಲ್ ಆಯ್ತು. ಈ ನಡುವೆ ಮೋದಿ ಸಂಪುಟದ ಖಾತೆ ಬದಲಾವಣೆ ವೇಳೆ ಸ್ಮøತಿ ಇರಾನಿಯವರಿಗೆ ಜವುಳಿ ಖಾತೆಯನ್ನು ನೀಡಿದ್ದರು.

8) ಪಿವಿ ಸಿಂಧು, ಸಾಕ್ಷಿ ಮಲಿಕ್:
ರಿಯೋ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಆರಂಭದಲ್ಲಿ ನಿರಾಸೆಯಾಗಿದ್ದರೂ ಕ್ರೀಡಾಕೂಟ ಮುಕ್ತಾಯವಾಗುವ ಸಂದರ್ಭದಲ್ಲಿ ಎರಡು ಪದಕಗಳು ಲಭಿಸಿತ್ತು. ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಬೆಳ್ಳಿ ಗೆದ್ದರೆ, 58 ಕೆಜಿ ವಿಭಾಗದ ಕುಸ್ತಿಯಲ್ಲಿ ಸಾಕ್ಷಿ ಮಲಿಕ್ ಕಂಚನ್ನು ಗೆದ್ದು ಭಾರತಕ್ಕೆ ಕೀರ್ತಿ ತಂದರು.

9) ಪಂಚರಾಜ್ಯಗಳ ಚುನಾವಣೆ:
ದೇಶದ ಗಮನ ಸೆಳೆದ ಪಂಚರಾಜ್ಯದ ಚುನಾವಣೆಯಲ್ಲಿ ಅಸ್ಸಾಂನಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಏರಿದ್ದರೆ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತದಾರ ಜೈ ಎಂದಿದ್ದಾನೆ. ಕೇರಳದಲ್ಲಿ ಎಲ್‍ಡಿಎಫ್ ಮೈತ್ರಿಕೂಟ ವಿಜಯದ ನಗೆ ಬೀರಿದರೆ ತಮಿಳುನಾಡಿನಲ್ಲಿ ಅಮ್ಮಾ ನೇತೃತ್ವದ ಎಐಎಡಿಎಂಕೆ ಗೆಲುವನ್ನು ಕಂಡಿತ್ತು. ಪುದುಚ್ಚೇರಿಯಲ್ಲಿ ಕಾಂಗ್ರೆಸ್ ಜಯಗಳಿಸಿತು.

10) ಹನುಮಂತಪ್ಪ ಕೊಪ್ಪದ್:
ವಿಶ್ವದ ಅತಿ ದೊಡ್ಡ ಯುದ್ಧ ಭೂಮಿ ಸಿಯಾಚಿನ್ ಯುದ್ಧ ಭೂಮಿಯಲ್ಲಿ ಕಣ್ಮರೆಯಾಗಿ 6 ದಿನಗಳ 35 ಅಡಿ ಆಳದ ಹಿಮದ ಅಡಿಯಲ್ಲಿ ಧಾರವಾಡದ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್ ಜೀವ ಉಳಿಸಿಕೊಂಡಿದ್ದರು. ದೆಹಲಿಯ ಆರ್‍ಆರ್ ಆಸ್ಪತ್ರೆಯಲ್ಲಿ ಮೂರು ದಿನಗಳ ಕೋಮಾದಲ್ಲಿದ್ದು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಹನುಮಂತಪ್ಪ ಅಂತಿಮವಾಗಿ ಫೆ.11ರಂದು ವಿಧಿವಶರಾದರು.

Comments are closed.