ನವದೆಹಲಿ: ನೋಟ್ ಬ್ಯಾನ್ ಆದ ಬಳಿಕ ದೇಶದ ಹಲವೆಡೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಕಪ್ಪುಕುಳಗಳ ನಿವಾಸದ ಮೇಲೆ ದಾಳಿ ಮಾಡುತ್ತಿದ್ದಾರೆ. ಆದರೆ ಈ ದಾಳಿಗೆ ಮೂಲ ಮಾಹಿತಿ ಸಿಗುವುದು ಪ್ರಧಾನಿ ಕಚೇರಿಯಿಂದ.
ಹೌದು. ನೋಟ್ ಬ್ಯಾನ್ ನಿರ್ಧಾರ ಕೈಗೊಂಡ ನಂತರ ಪ್ರಧಾನಿ ಕಾಳಧನಿಕರ ಮೇಲೆ ದಾಳಿ ನಡೆಸಲು ಪ್ರಧಾನಿ ಕಚೇರಿಯಲ್ಲೇ ವಿಶೇಷ ರಹಸ್ಯ ತಂಡವನ್ನು ರಚಿಸಿದ್ದಾರೆ.
ಈ ತಂಡ ಪ್ರಧಾನಿ ಕಚೇರಿಗೆ ಬರುತ್ತಿರುವ ಫೋನ್ ಕರೆ ಮತ್ತು ಇಮೇಲ್ಗಳನ್ನು ಪರಿಶೀಲಿಸಿ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ಮಾಹಿತಿ ನೀಡುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಿ ಕಚೇರಿಗೆ ಈಗ ಪ್ರತಿನಿತ್ಯ 20 ಕರೆಗಳು ಬರುತ್ತಿದ್ದು, ನವೆಂಬರ್ 8ರ ಬಳಿಕ ಇದೂವರೆಗೆ 700ಕ್ಕೂ ಹೆಚ್ಚು ಕರೆಗಳು ಬಂದಿದೆ. ವಿಶೇಷ ಏನೆಂದರೆ ಕಪ್ಪುಕುಳಗಳ ಬಗ್ಗೆ ಮಾಹಿತಿಯನ್ನು ಸಾಮಾನ್ಯ ಜನರೇ ನೇರವಾಗಿ ನೀಡುತ್ತಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.