ರಾಷ್ಟ್ರೀಯ

ನೋಟು ನಿಷೇಧ: ಬೆಳೆಗೆ ಬೆಲೆ ಇಲ್ಲದೆ ಕಂಗಾಲಾದ ರೈತ

Pinterest LinkedIn Tumblr

tomato
ನವದೆಹಲಿ: ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದರಿಂದ ನಗದು ಸಮಸ್ಯೆ ಉಲ್ಬಣವಾಗುತ್ತಿದ್ದಂತೆ ರೈತರೂ ಕಂಗಾಲಾಗಿದ್ದಾರೆ. ಈ ವರ್ಷ ಉತ್ತಮ ಫಸಲು ಬಂದಿದ್ದರೂ ಮಾರುಕಟ್ಟೆಯಲ್ಲಿ ಕೊಳ್ಳಲು ಗ್ರಾಹಕರಿಲ್ಲದೆ ಕೃಷಿಕರು ಒದ್ದಾಡುತ್ತಿದ್ದಾರೆ.

ಸಗಟು ವ್ಯಾಪಾರ ಮಾರುಕಟ್ಟೆಯಲ್ಲಿ ಬೆಲೆ ಪಾತಾಳಕ್ಕಿಳಿದಿರುವುದರಿಂದ ಬೆಳೆದ ಬೆಳೆಗೆ ಬೆಲೆ ಇಲ್ಲದೆ, ಕೈಯಲ್ಲಿ ಕಾಸೂ ಇಲ್ಲದೆ ಪರದಾಡುವ ಸ್ಥಿತಿ ದೇಶದಾದ್ಯಂತವಿರುವ ರೈತರದ್ದು. ಈರುಳ್ಳಿ, ಟೊಮೆಟೊ, ಹೂಕೋಸು, ಆಲೂಗೆಡ್ಡೆ ಬೆಳೆಯುವ ರೈತರ ಜೀವನದಲ್ಲಿ ನೋಟು ಸಮಸ್ಯೆ ಯಾವ ರೀತಿಯ ಪರಿಣಾಮ ಬೀರಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿಯೊಂದನ್ನು ತಯಾರಿಸಿದೆ.

ಆಂಧ್ರ ಪ್ರದೇಶ
ಕಳೆದ ಬುಧವಾರ ಅನಂತಪುರ ಜಿಲ್ಲೆಯ ಎಸ್ ರಾಜು ಎಂಬವರು ಬೋವೆನ್‍ಪಳ್ಳಿ ಮಾರುಕಟ್ಟೆಗೆ ಟೊಮೆಟೊ ಮಾರಲು ಬಂದು ಬರಿಗೈಲಿ ವಾಪಾಸಾಗಿದ್ದಾರೆ. ಒಂದು ಕೆಜಿ ಟೊಮೆಟೊದ ಬೆಲೆ ₹4 ಇದ್ದರೂ ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಒಂದು ಕೆಜಿ ಟೊಮೆಟೊಗೆ ₹ 2 ಕೊಡುವುದಾಗಿ ಹೇಳಿದ್ದರು. ಅನಂತಪುರದಿಂದ 400 ಕಿಮಿ ಸಂಚರಿಸಿ ಮಾರುಕಟ್ಟೆಗೆ ಬರುವುದಕ್ಕೇ ಖರ್ಚು ಜಾಸ್ತಿಯಿರುವಾಗ ಅಷ್ಟೊಂದು ಕಡಿಮೆ ಬೆಲೆಗೆ ಟೊಮೆಟೊ ಮಾರಲು ಸಾಧ್ಯವಾಗದೆ ನಿರಾಶರಾದ ರಾಜು ತಾನು ತಂದಿದ್ದ ಟೊಮೆಟೊಗಳನ್ನು ಮಾರುಕಟ್ಟೆಯ ರಸ್ತೆಗೆ ಸುರಿದಿದ್ದಾರೆ. ಅನಂತಪುರ ಮಾತ್ರವಲ್ಲ ರಾಯಲಸೀಮೆಯಲ್ಲಿರುವ ರೈತರ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ.

ಉತ್ತರ ಪ್ರದೇಶ

ಉತ್ತರ ಪ್ರದೇಶದ ಆಲೂಗೆಡ್ಡೆ ಬೆಳೆಗಾರರೂ ಸಂಕಷ್ಟ ಎದುರಿಸುತ್ತಿದ್ದಾರೆ, ಜುಲೈ- ಆಗಸ್ಟ್ ತಿಂಗಳಲ್ಲಿ ಆಲೂಗೆಡ್ಡೆ ಕ್ವಿಂಟಲ್‍ಗೆ ₹1,500ಕ್ಕೆ ಮಾರಾಟವಾಗುತ್ತಿತ್ತು. ಮುಂದಿನ ದಿನಗಳಲ್ಲಿ ಬೆಲೆ ಇನ್ನೂ ಏರಿಕೆಯಾಗಬಹುದೆಂದು ರೈತರು ಊಹಿಸಿದ್ದರು. ಆದರೆ ಹಾಗಾಗಲಿಲ್ಲ ಎಂದು ಆಲೂಗೆಡ್ಡೆ ಕೃಷಿಕರೊಬ್ಬರು ಹೇಳಿದ್ದಾರೆ. ದೇಶದಲ್ಲಿ ಶೇ. 35-40 ಆಲೂಗೆಡ್ಡೆ ಕೃಷಿ ಉತ್ತರ ಪ್ರದೇಶದಲ್ಲಿ ಬೆಳೆಯಲಾಗುತ್ತದೆ.

ಮಧ್ಯಪ್ರದೇಶ

ಮಂದಸೌರ್ -ನೀಮುಚ್ ಪ್ರದೇಶದಲ್ಲಿನ ರೈತರು ಅತೀ ಕಡಿಮೆ ಬೆಲೆಗೆ ಈರುಳ್ಳಿ ಮಾರಲೇಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಇಲ್ಲಿ ಒಂದು ಕೆಜಿ ಈರುಳ್ಳಿ ಬೆಲೆ ಕೇವಲ ₹1 !
ನಗದು ಸಮಸ್ಯೆ ಇರುವ ಕಾರಣ ಕೃಷಿ ಉತ್ಪನ್ನಗಳನ್ನು ಖರೀದಿಸಲು ವ್ಯಾಪಾರಿಗಳು ಮುಂದಾಗುತ್ತಿಲ್ಲ. ನಗದು ರಹಿತ ವಹಿವಾಟು ನಡೆಸುವ ಬಗ್ಗೆ ಆದಾಯ ತೆರಿಗೆ ಇಲಾಖೆ ಸಲಹೆ ನೀಡಿದರೂ ವ್ಯಾಪಾರಿಗಳು ಇದಕ್ಕೆ ಒಪ್ಪುತ್ತಿಲ್ಲ ಎಂದು ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಏಪ್ರಿಲ್ ತಿಂಗಳಲ್ಲಿ ಈರುಳ್ಳಿ ಬೆಲೆ ಕೆಜಿಗೆ ₹6 ಇತ್ತು ಆದರೆ ಈಗ ನೀಮುಚ್‍ನಲ್ಲಿ ಈರುಳ್ಳಿ ಕೆಜಿ ಬೆಲೆ 25 ಪೈಸೆ ಆಗಿದೆ.
ಬಿಹಾರ
ಪಾಟ್ನಾ, ವೈಸಾಲಿ, ಮುಜಾಫರ್ ನಗರ್ ಮತ್ತು ಇತರ ಜಿಲ್ಲೆಗಳಲ್ಲಿ ಹೂಕೋಸು ಬೆಳೆಗಾರರು ಅಕ್ಷರಶಃ ಬೀದಿಗೆ ಬಂದಿದ್ದಾರೆ. ಮಾರುಕಟ್ಟೆಯಲ್ಲಿ ಒಂದು ಕೆಜಿ ಹೂಕೋಸಿನ ಬೆಲೆ ₹10- 15 ಆಗಿದೆ. ಸಗಟು ಮಾರುಕಟ್ಟೆಯಲ್ಲಿ ಇದರ ಬೆಲೆ ಮೂರನೇ ಒಂದರಷ್ಟಕ್ಕೆ ತಲುಪಿದೆ.

ಈ ವರ್ಷ ಉತ್ತಮ ಫಸಲು ಬಂದಿತ್ತು. ಉತ್ಪನ್ನದ ಬೆಲೆ ಕುಸಿಯಲು ಇದೂ ಕಾರಣ ಅಂತಾರೆ ಅಲ್ಲಿವ ವ್ಯಾಪಾರಿ.

Comments are closed.