ಮುಂಬೈ: ಅಪ್ರಮಾಣಿಕರಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಭ್ರಷ್ಟರಿಗೆ ಮತ್ತು ಕಾಳಧನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮುಂಬೈನಲ್ಲಿ ಎರಡು ಪ್ರಮುಖ ಮೆಟ್ರೊ ರೈಲು ಯೋಜನೆಯನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, 50 ದಿನಗಳ ನಂತರ ನೋಟ್ ನಿಷೇಧ ಸಂಕಷ್ಟ ಅಂತ್ಯವಾಗಲಿದೆ. ನಂತರ ಅಪ್ರಮಾಣಿಕರು ಮತ್ತಷ್ಟು ಸಂಕಷ್ಟ ಎದುರಿಸಲಿದ್ದು, ಪ್ರಮಾಣಿಕರು ನಿರಾಳರಾಗಲಿದ್ದಾರೆ ಎಂದು ಹೇಳಿದ್ದಾರೆ.
500 ಹಾಗೂ 1000 ರುಪಾಯಿ ನೋಟ್ ನಿಷೇಧ ಕೇಂದ್ರ ಸರ್ಕಾರದ ಐತಿಹಾಸಿಕ ನಿರ್ಧಾರ ಎಂದ ಮೋದಿ, ಭಾರತ ಜನತೆ ಕಪ್ಪುಹಣ ಮತ್ತು ಭ್ರಷ್ಟಾಚಾರವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ. ಭ್ರಷ್ಟಾಚಾರದ ವಿರುದ್ಧದ ನಮ್ಮ ಹೋರಾಟಕ್ಕೆ ದೇಶದ ಜನತೆ ಬೆಂಬಲ ನೀಡಿದ್ದಾರೆ ಎಂದರು.
ನೋಟ್ ನಿಷೇಧದ ನಂತರ ಜನತೆ ಹಲವು ಕಠಿಣ ಸಮಸ್ಯೆಗಳನ್ನು ಎದುರಿಸಿದ್ದಾರೆ. ಆದರೂ ಪ್ರತಿಪಕ್ಷಗಳ ಟೀಕೆಗಳಿಗೆ ಬೆಲೆ ಕೊಡದೇ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ ಎಂದರು.
ಪ್ರಧಾನಿ ಮೋದಿ ಅವರು ಮೆಟ್ರೋ ರೈಲು ಯೋಜನೆಗೆ ಚಾಲನೆ ನೀಡಿದ ಬಳಿಕ ಛತ್ರಪತಿ ಶಿವಾಜಿ ಪ್ರತಿಮೆ ಹಾಗೂ ಸ್ಮಾರಕಕ್ಕೆ ಶಿಲಾನ್ಯಾಸ ನೆರವೇರಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ಶಿವಾಜಿ ಮಹಾರಾಜ ಓರ್ವ ಹೋರಾಟಗಾರ ಮಾತ್ರವಲ್ಲ, ಒಬ್ಬ ಒಳ್ಳೆಯ ನಾಯಕರಾಗಿದ್ದರು ಮತ್ತು ಇತರರಿಗೆ ಆದರ್ಶವಾಗಿದ್ದರು ಎಂದರು.