ರಾಷ್ಟ್ರೀಯ

ಜಫ್ತಿ ಮಾಡಿದ ಹೊಸ 2 ಸಾವಿರ ರೂ. ನೋಟ್‍ಗಳನ್ನು ಏನ್ ಮಾಡ್ತಾರೆ?

Pinterest LinkedIn Tumblr

note1
ನವದೆಹಲಿ: ನೋಟ್‍ಬ್ಯಾನ್ ನಂತರ ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ ಹಾಗೂ ಪೊಲೀಸರು ದೇಶದಾದ್ಯಂತ ವಿವಿಧ ಕಡೆ ದಾಳಿ ಮಾಡಿ ಕಾಳಧನಿಕರು ಅಕ್ರಮವಾಗಿ ಇಟ್ಟುಕೊಂಡಿದ್ದ ಭಾರೀ ಮೊತ್ತದ ಹೊಸ 2 ಸಾವಿರ ರೂ. ಮುಖಬೆಲೆಯ ನೋಟ್‍ಗಳನ್ನ ಸೀಜ್ ಮಾಡಿದ್ದಾರೆ. ಆದ್ರೆ ಸೀಜ್ ಆದ ಈ ಹಣವನ್ನ ಅವರು ಏನ್ ಮಾಡ್ತಾರೆ ಎಂಬ ಪ್ರಶ್ನೆ ಮೂಡುತ್ತದೆ.

ಈ ಬಗ್ಗೆ ವಲಯ ಘಟಕಗಳಿಗೆ ಮಾರ್ಗಸೂಚಿ ಹೊರಡಿಸಿರೋ ಜಾರಿ ನಿರ್ದೇಶನಾಲಯ, ಸೀಜ್ ಮಾಡಲಾದ ಹೊಸ ನೋಟ್‍ಗಳು ಸೇರಿದಂತೆ ಎಲ್ಲಾ ಕರೆನ್ಸಿಯನ್ನ ಬ್ಯಾಂಕ್ ಖಾತೆಯಲ್ಲಿ ಜಮೆ ಮಾಡುವಂತೆ ಸೂಚಿಸಿದೆ.

ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರೋ ಜಾರಿ ನಿರ್ದೇಶನಾಲಯದ ನಿರ್ದೇಶಕ ಕರ್ನಲ್ ಸಿಂಗ್, ಮೊದಲಿಗೆ ಸೀಜ್ ಮಾಡಲಾದ ಹಣ ಹಾಗೂ ಇತರೆ ವಸ್ತುಗಳನ್ನ ಸ್ಟ್ರಾಂಗ್ ರೂಮ್‍ನಲ್ಲಿಡಲು ಹೇಳಿದ್ದೆವು. ಈಗ ಈ ಹಣವನ್ನ ನಮ್ಮ ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಇಡುತ್ತಿದ್ದೇವೆ. ಹೊಸ ನೋಟ್‍ಗಳು ಮತ್ತೆ ಚಲಾವಣೆಗೆ ಬರಬೇಕು ಹಾಗೂ ನೋಟ್‍ಗಳ ಕೊರತೆಯಿಂದ ಜನರಿಗೆ ತೊಂದರೆಯಾಗಬಾರದು ಎಂಬ ಕಾರಣದಿಂದ ಈ ರೀತಿ ಮಾಡುತ್ತಿದ್ದವೆ ಎಂದು ತಿಳಿಸಿದ್ದಾರೆ. ಅಲ್ಲದೆ ಆದಾಯ ತೆರಿಗೆ ಇಲಾಖೆಗೂ ಕೂಡ ಸೀಜ್ ಮಾಡಿದ ಹಣವನ್ನು ಬ್ಯಾಂಕ್‍ನಲ್ಲಿ ಜಮೆ ಮಾಡುವಂತೆ ಸರ್ಕಾರ ಹೇಳಿದೆ.

ಮೊದಲು ಏನು ಮಾಡ್ತಿದ್ರು: ಈ ಹಿಂದೆ ಐಟಿ ಅಥವಾ ಇಡಿ ದಾಳಿ ನಡೆಸಿದ ಪ್ರಕರಣದ ಬಗ್ಗೆ ವಿಚಾರಣೆ ನಡೆದು ತೀರ್ಪು ಹೊರಬೀಳುವವರೆಗೂ ದಾಳಿ ವೇಳೆ ಸೀಜ್ ಮಾಡಲಾದ ಹಣ, ಚಿನ್ನಾಭರಣ ಹಾಗೂ ಇತರೆ ವಸ್ತುಗಳನ್ನು ಪ್ರಕರಣದ ಸಾಕ್ಷಿ ಎಂದು ಪರಿಗಣಿಸಿ ಸ್ಟ್ರಾಂಗ್ ರೂಮ್‍ನಲ್ಲಿ ಇಡಲಾಗುತ್ತಿತ್ತು. ನಂತರ ಹಣವನ್ನು ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾಗೆ ಜಮೆ ಮಾಡಲಾಗುತ್ತಿತ್ತು. ಕೆಲವೊಮ್ಮೆ ಆದಾಯ ತೆರಿಗೆ ಇಲಾಖೆಯ ಪ್ರಕರಣಗಳು ಇತ್ಯರ್ಥವಾಗಲು ವರ್ಷಾನುಗಟ್ಟಲೆ ಸಮಯ ಹಿಡಿಯುತ್ತಿತ್ತು. ಅಲ್ಲಿಯವರೆಗೂ ಹಣವನ್ನು ಇಲಾಖೆಯ ಸೇಫ್ ಲಾಕರ್‍ನಲ್ಲೇ ಇಡಲಾಗುತ್ತಿತ್ತು ಎಂದು ಐಟಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ನೋಟ್‍ಬ್ಯಾನ್ ಆದ ನಂತರ ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯ ಸುಮಾರು 100 ಕೋಟಿ ರೂ. ಹೊಸ 2000 ರೂ. ನೋಟ್‍ಗಳನ್ನ ಜಪ್ತಿ ಮಾಡಿದೆ.

Comments are closed.