ರಾಷ್ಟ್ರೀಯ

ಗುಜರಾತಿನಲ್ಲಿ ತಾಳ್ಮೆ ಕಳೆದುಕೊಂಡ ಜನರಿಂದ ಬ್ಯಾಂಕ್‍ ಮೇಲೆ ದಾಳಿ

Pinterest LinkedIn Tumblr

atm
ಅಹಮದಾಬಾದ್: ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ ನಂತರ ಕೈಯಲ್ಲಿ ಕಾಸಿಲ್ಲದೆ ತಾಳ್ಮೆ ಕಳೆದುಕೊಂಡ ಜನರು ಬ್ಯಾಂಕ್ ಮೇಲೆ ದಾಳಿ ನಡೆಸಿದ ಘಟನೆ ಗುಜರಾತ್‍ನಲ್ಲಿ ನಡೆದಿದೆ.

ಗುಜರಾತ್‍ನ ಎರಡು ಜಿಲ್ಲೆಗಳಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ದೇನಾ ಬ್ಯಾಂಕ್ ಶಾಖೆಗಳ ಮೇಲೆ ಅಲ್ಲಿನ ನಾಗರಿಕರು ದಾಳಿ ನಡೆಸಿದ್ದಾರೆ.

ಸೋಮವಾರ ಬ್ಯಾಂಕ್ ಮುಂದೆ ಸಾಲುಗಟ್ಟಿ ನಿಂತಿದ್ದ ಜನರು ಬ್ಯಾಂಕ್‍ನಲ್ಲಿ ದುಡ್ಡಿಲ್ಲ ಎಂದು ಹೇಳಿದಾಗ ಕೋಪಗೊಂಡು ಬ್ಯಾಂಕ್ ಮೇಲೆ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ದಾಳಿ ನಡೆಸಿದವರಲ್ಲಿ ಹೆಚ್ಚಿನವರು ರೈತರಾಗಿದ್ದಾರೆ.

ಶನಿವಾರ ಸುರೇಂದ್ರ ನಗರ ಜಿಲ್ಲೆಯಲ್ಲಿ ಬ್ಯಾಂಕ್ ಮುಚ್ಚಿದ್ದಕ್ಕೆ ಕೋಪಗೊಂಡ ನಾಗರಿಕರು ಬ್ಯಾಂಕ್ ಮೇಲೆ ದಾಳಿ ನಡೆಸಿ ಬ್ಯಾಂಕ್‍ನ ಕಿಟಕಿ, ಬಾಗಿಲುಗಳನ್ನು ಮುರಿದಿದ್ದಾರೆ.

ಬ್ಯಾಂಕ್‍ನಲ್ಲಿ ನಗದು ಇಲ್ಲದೇ ಇರುವ ಕಾರಣ ಬ್ಯಾಂಕ್ ಕಾರ್ಯವೆಸಗುತ್ತಿಲ್ಲ. ಆದ್ದರಿಂದ ಮೂರು ದಿನಗಳ ಕಾಲ ಬ್ಯಾಂಕ್ ಮುಚ್ಚಲಾಗಿತ್ತು ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದಾರೆ.

ಕೇಂದ್ರಾಡಳಿತ ಪ್ರದೇಶಗಳಾದ ದಾದ್ರಾ ಮತ್ತು ನಾಗರ್ ಹವೇಲಿಯ ರಾಜಧಾನಿಯಾದ ಸಿಲ್ವಸ್ಸಾದಲ್ಲಿ ಬ್ಯಾಂಕ್ ನಲ್ಲಿ ನಗದು ಇಲ್ಲ ಎಂದು ಹೇಳಿದ ಬ್ಯಾಂಕ್ ಅಧಿಕಾರಿಗಳ ಮೇಲೆ ಜನರು ರೊಚ್ಚಿಗೆದ್ದು ದಾಂಧಲೆ ನಡೆಸಿದ್ದರು. ಪೊಲೀಸರ ಮಧ್ಯಪ್ರವೇಶಿಸಿ ಬ್ಯಾಂಕ್ ಅಧಿಕಾರಿಗಳನ್ನು ರಕ್ಷಿಸಿದ್ದರು.

Comments are closed.