ನವದೆಹಲಿ (ಡಿ. 20): ಪ್ರಧಾನಿ ಮೋದಿ ದಿನವೊಂದಕ್ಕೆ ಬೇರೆ ಬೇರೆ ರ್ಯಾಲಿಯಲ್ಲಿ ಭಾಗವಹಿಸುವಾಗ ಬಟ್ಟೆ ಬದಲಿಸಿದಂತೆ ಆರ್ ಬಿಐ ತನ್ನ ನೀತಿಗಳನ್ನು ಬದಲಾಯಿಸುತ್ತಿದೆ ಎಂದು ರಾಹುಲ್ ಗಾಂಧಿ ಕಟುಕಿದ್ದಾರೆ.
ಆರ್ ಬಿಐ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ದಿನ ದಿನಕ್ಕೆ ಹೊಸ ಹೊಸ ನೀತಿಗಳನ್ನು ಘೋಷಿಸುತ್ತಿರುವುದನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಪ್ರಧಾನಿ ಬಟ್ಟೆ ಬದಲಿಸಿದಂತೆ ಆರ್ ಬಿಐ ನೀತಿಗಳನ್ನು ಬದಲಾಯಿಸುತ್ತಿದೆ ಎಂದಿದ್ದಾರೆ.
ಕಳೆದ ವಾರ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಪ್ರಧಾನಿಯವರನ್ನು ಭೇಟಿ ಮಾಡಿ ರೈತರ ಸಂಕಷ್ಟಗಳ ಬಗ್ಗೆ ಚರ್ಚೆ ನಡೆಸಿದ್ದರು. ಭೇಟಿಯ ಬಳಿಕ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿತ್ತ ನೀತಿಯ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ, ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿರುವ ಆರ್ ಬಿಐ ಮತ್ತು ವಿತ್ತ ಸಚಿವ ಅರುಣ್ ಜೇಟ್ಲಿ ಈ ಇಬ್ಬರಲ್ಲಿ ಯಾರನ್ನು ನಂಬುವುದು ಎಂದು ಜನರಿಗೆ ಗೊತ್ತಾಗುತ್ತಿಲ್ಲವೆಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಇದು ಕಾಂಗ್ರೆಸ್ ನ ಬೌದ್ಧಿಕ ದಿವಾಳಿತನವನ್ನು ಸೂಚಿಸುತ್ತದೆ ಎಂದಿದೆ.