ರಾಷ್ಟ್ರೀಯ

ನೋಟು ನಿಷೇಧದಿಂದ ಆದ ಹಾನಿಗೆ ಜೇಟ್ಲಿ ವಿರುದ್ಧ ಸುಬ್ರಹ್ಮಣಿಯನ್ ಸ್ವಾಮಿ ಆರೋಪ

Pinterest LinkedIn Tumblr

swami-jetly

ನವದೆಹಲಿ: ನೋಟು ನಿಷೇಧದ ಬಗ್ಗೆ ಬಿಜೆಪಿ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದು, ನೋಟು ನಿಷೇಧದಿಂದ ಮೇಲಾಧಾರ ಹಾನಿ ಅಥವಾ ‘ಕೊಲಾಟರಲ್ ಡ್ಯಾಮೇಜ್’ ಸಂಭವಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

500, 1000 ರೂ ಮುಖಬೆಲೆಯ ನೋಟುಗಳ ಅಮಾನ್ಯದ ನಿರ್ಧಾರದಿಂದ ಹಾನಿಯುಂಟಾಗಿದೆ ಎಂದು ಹೇಳಿರುವ ಸುಬ್ರಹ್ಮಣಿಯನ್ ಸ್ವಾಮಿ ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ದೂಷಿಸಿಲ್ಲ. ಬದಲಾಗಿ ಹಣಕಾಸು ಸಚಿವಾಲಯವನ್ನು ದೂಷಿಸಿದ್ದು ಎಂದಿನಂತೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ.

ನೋಟು ನಿಷೇಧ ಅಗತ್ಯವಾಗಿತ್ತು ಎಂದಿರುವ ಸ್ವಾಮಿ, ನೋಟು ನಿಷೇಧದ ಯೋಜನೆಯನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಅತ್ಯಂತ ಕಳಪೆಯಾಗಿ ನಿರ್ವಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಯೋಜನೆಗೆ ಸಂಬಂಧಿಸಿದಂತೆ ತುರ್ತು ಅಥವಾ ಮುಂಜಾಗೃತಾ ಕ್ರಮಗಳು ನೋತು ನಿಷೇಧದ ಘೋಷಣೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಯಶಸ್ವಿಗೊಳಿಸಬಹುದಿತ್ತು ಎಂದು ಸುಬ್ರಹ್ಮಣಿಯನ್ ಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಕೇಂದ್ರ ಸರ್ಕಾರ ಘೊಷಿಸಿದ್ದ ಕ್ರಮಕ್ಕೆ ಪೂರಕವಾಗಿ ನಾನು ಒಂದು ಸಲಹೆ ನೀಡಿದ್ದೆ. ಆದರೆ ಹಣಕಾಸು ಸಚಿವಾಲಯ ಅದನ್ನು ಅನಗತ್ಯವಾಗಿ ಬದಲಾವಣೆ ಮಾಡಿ ದಲ್ಲಾಳಿಗಳಿಗೆ ಅನುಕೂಲವಾಯಿತು ಎಂದು ಹೇಳಿರುವ ಸುಬ್ರಹ್ಮಣಿಯನ್ ಸ್ವಾಮಿ ಇತ್ತೀಚೆಗಷ್ಟೆ ಐಟಿ ದಾಳಿಯಲ್ಲಿ ಸಿಕ್ಕಿಬಿದ್ದಿರುವ ಅಧಿಕಾರಿಗಳನ್ನು ಕಪ್ಪುಹಣವನ್ನು ಅಧಿಕೃತಗೊಳಿಸಲು ಸಹಕಾರಿಯಾಗಿದ್ದ ದಲ್ಲಾಳಿಗಳೆಂದು ಹೇಳಿದ್ದಾರೆ.

ಕಳೆದ ತಿಂಗಳೂ ಸಹ ನೋಟು ನಿಷೇಧದ ಬಗ್ಗೆ ಪ್ರತಿಕ್ರಿಯಿಸಿದ್ದ ಸುಬ್ರಹ್ಮಣಿಯನ್ ಸ್ವಾಮಿ, ಅರುಣ್ ಜೇಟ್ಲಿ ಸೂಕ್ತ ಸಿದ್ಧತೆ ನಡೆಸಿರಲಿಲ್ಲ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ ಎಟಿಎಂ ಗಳಲ್ಲಿ ಉದ್ದುದ್ದ ಕಂಡುಬಂದಿರುವ ಸರತಿ ಸಾಲುಗಳಿಗೆ ಕಾರಣವಾಗಿರುವುದು ಅರುಣ್ ಜೇಟ್ಲಿಯೇ ಹೊರತು ಪ್ರಧಾನಿ ನರೇಂದ್ರ ಮೋದಿ ಅವರಲ್ಲ ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಕಾರ್ಯನಿರ್ವಹಣೆ ಬಗ್ಗೆ ನನಗೆ ತೃಪ್ತಿ ಇದೆ, ಆದರೆ ಅರುಣ್ ಜೇಟ್ಲಿ ಅವರ ಕಾರ್ಯನಿರ್ವಹಣೆ ಬಗ್ಗೆ ನನಗೆ ತೃಪ್ತಿ ಇಲ್ಲ ಎಂದು ಸುಬ್ರಹ್ಮಣಿಯನ್ ಸ್ವಾಮಿ ಹೇಳಿದ್ದರು.

Comments are closed.