ರಾಷ್ಟ್ರೀಯ

ಜಯಲಲಿತಾ ನಿಧನದ ಸಂತಾಪದಲ್ಲಿ ಮೋದಿ-ಸೋನಿಯಾ ಹೇಳಿದ್ದು ಹೀಗೆ…

Pinterest LinkedIn Tumblr

narendra-modi-and-jayalalithaa

ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ನಿಧನ ಹೊಂದಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ತೀವ್ರ ಸಂತಾಪವನ್ನು ಸೂಚಿಸಿದ್ದಾರೆ.

ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಜಯಲಲಿತಾ ಅವರ ಅಕಾಲಿಕ ಮರಣ ತೀವ್ರ ನೋವನ್ನು ತಂದಿದೆ. ಅವರ ಅಗಲಿಕೆ ಭಾರತೀಯ ರಾಜಕೀಯಕ್ಕೆ ತುಂಬಲಾರದ ನಷ್ಟ ಎಂದು ಹೇಳಿದ್ದಾರೆ.

ಜನರೊಂದಿಗೆ ಜಯಲಲಿತಾ ಅವರ ಸಂಪರ್ಕ ಅವಿನಾಭಾವವಾಗಿತ್ತು. ಬಡ ಜನರ ಪರವಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದರು. ಮಹಿಳೆಯರಿಗೆ ಜಯಲಲಿತಾ ಅವರು ಎಂದಿಗೂ ಸ್ಫೂರ್ತಿದಾಯಕ ವ್ಯಕ್ತಿಯಾಗಿದ್ದಾರೆಂದು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಜಯಲಲಿತಾ ಅವರ ಅಕಾಲಿಕ ನಿಧನ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆಂದು ಹೇಳಲಾಗುತ್ತಿದ್ದು, ಪಾರ್ಥೀವ ಶರೀರದ ಅಂತಿಮ ದರ್ಶನವನ್ನು ಪಡೆಯಲಿದ್ದಾರೆಂದು ತಿಳಿದುಬಂದಿದೆ.

ಅದಮ್ಯ ಧೈರ್ಯದಿಂದಲೇ ಹೋರಾಟ ನಡೆಸಿಕೊಂಡು ಬಂದವರು: ಸೋನಿಯಾ

sonia

ನವದೆಹಲಿ: ತಮಿಳುನಾಡು ಸಿಎಂ ಜಯಲಲಿತಾ ಅವರ ನಿಧನಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸಂತಾಪ ಸೂಚಿಸಿದ್ದು, ಜೀವನದ ಕೊನೆಯ ವರೆಗೂ ಅದಮ್ಯ ಧೈರ್ಯದಿಂದಲೇ ಹೋರಾಟ ನಡೆಸಿಕೊಂಡು ಬಂದಿದ್ದರು ಎಂದು ಬಣ್ಣಿಸಿದ್ದಾರೆ.

“ಅನಾರೋಗ್ಯದೊಂದಿಗೆ ಹೋರಾಡಿದಂತೆಯೇ ಜಯಲಲಿತಾ ತಮ್ಮ ಜೀವನದ ಹಲವು ಮಜಲುಗಳಲ್ಲಿ ಎದುರಾದ ಸಂಕಷ್ಟಗಳನ್ನೂ ಧೈರ್ಯವಾಗಿ ಎದುರಿಸಿದ್ದರು, ಜಯಲಲಿತಾ ಅವರ ನಿಧನದ ವಾರ್ತೆ ದುಃಖ ಉಂಟು ಮಾಡಿದೆ ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

ನಾಲ್ಕು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಜಯಲಲಿತಾ ಅಲ್ಲಿನ ಜನರ ಸಮಸ್ಯೆಗಳನ್ನು ಅರಿತು, ಜನರ ನಿರೀಕ್ಷೆಗಳನ್ನು ಈಡೇರಿಸಿದ್ದರು, ಜಯಲಲಿತಾ ನಿಜವಾಗಿಯೂ ಓರ್ವ ಅತ್ಯುತ್ತಮ ಆಡಳಿತಗಾರರಾಗಿದ್ದರು, ಕಾಂಗ್ರೆಸ್ ಪಕ್ಷ ಹಾಗೂ ತಮಗೆ ಜಯಲಲಿತಾ ಅವರ ನಿಧನದ ವಾರ್ತೆ ತೀವ್ರ ದುಃಖ ಉಂಟುಮಾಡಿದೆ ಎಂದು ಸೋನಿಯಾ ಗಾಂಧಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

Comments are closed.