ಚೆನ್ನೈ: ತಮಿಳುನಾಡಿನಲ್ಲಿ ಮುಖ್ಯಮಂತ್ರಿಯಾಗಿ ತಮಿಳಿಗರ ಪಾಲಿನ ‘ಅಮ್ಮ’ ಎನಿಸಿಕೊಂಡ ಜೆ. ಜಯಲಲಿತಾ ಕನ್ನಡತಿ. ಈಕೆಯ ಮೂಲ ಹೆಸರು ಕೋಮಲವಲ್ಲಿ.
ಜಯಲಲಿತಾ ತಂದೆ ಜಯರಾಮ್ ವಕೀಲ, ತಾಯಿ ಸಂಧ್ಯಾ ಚಿತ್ರನಟಿ. ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಇವರು ಜನಿಸಿದ್ದು, ನಾಲ್ಕು ವರ್ಷದ ಮಗುವಾಗಿದ್ದಾಗಲೇ ಇವರ ತಂದೆ ಮೃತಪಟ್ಟಿದ್ದರು. ಮನೆಯವರ ಮುದ್ದಿನ ಅಮ್ಮು ಆಗಿದ್ದ ಜಯ ಬೆಂಗಳೂರಿನ ಬಿಷಪ್ ಕಾಟನ್ ಗರ್ಲ್ಸ್ ಹೈಸ್ಕೂಲಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ್ದರು. 15 ವರ್ಷದ ಹುಡುಗಿಯಾಗಿದ್ದಾಗ ಚಿತ್ರರಂಗ ಪ್ರವೇಶಿಸಿದ್ದ ಇವರು 10ನೇ ತರಗತಿಯಲ್ಲಿ ತಮಿಳುನಾಡಿಗೇ ಫಸ್ಟ್ ಱಂಕ್ ಗಳಿಸಿದ್ದ ಪ್ರತಿಭಾನ್ವಿತೆ.
ಜಯಲಲಿತಾಗೆ ಕನ್ನಡ, ಹಿಂದಿ, ಇಂಗ್ಲಿಷ್, ತಮಿಳು ಹಾಗೂ ತೆಲುಗು ಈ 5 ಭಾಷೆಗಳ ಮೇಲೆ ಅದ್ಭುತ ಪ್ರಭುತ್ವವಿತ್ತು. ಶಾಸ್ತ್ರೀಯ ಸಂಗೀತ, ನೃತ್ಯ, ಗಾಯನದಲ್ಲಿ ಪ್ರಾವೀಣ್ಯತೆಯನ್ನೂ ಸಾಧಿಸಿದ್ದರು. ಇವರು ನೃತ್ಯ ಪ್ರದರ್ಶನ ನೀಡಿ ಸರ್ಕಾರಿ ಶಾಲೆಗೆ ದೇಣಿಗೆಯನ್ನೂ ಕೊಟ್ಟಿದ್ದರು