ರಾಷ್ಟ್ರೀಯ

ಕೋಟ್ಯಂತರ ತಮಿಳರ ಹೃದಯ ಗೆದ್ದ ಅತ್ಯಂತ ಜನಪ್ರಿಯ ಮುಖ್ಯಮಂತ್ರಿಯಾಗಿ ಬೆಳೆದ ದಾರಿ…

Pinterest LinkedIn Tumblr

jaya

ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರು ಮೂಲತ ಕನ್ನಡದವರಾದರೂ ಕೋಟ್ಯಂತರ ತಮಿಳರ ಹೃದಯಗಳಲ್ಲಿ ಪ್ರೀತಿಯ ‘ಅಮ್ಮ’ನಾಗಿ ಹಾಗೂ ಎಐಎಡಿಎಂಕೆಯ ಪುರಚ್ಚಿ ತಲೈವಿ(ಕ್ರಾಂತಿಕಾರಿ ನಾಯಕಿ)ಯಾಗಿ ಸ್ಥಾನ ಪಡೆದಿದ್ದರು. ಈ ಮಟ್ಟದ ನಾಯಕಿಯಾಗಿ ಬೆಳೆದ ದಾರಿ ಹೂವಿನ ಹಾಸಿಗೆಯಾಗಿರಲಿಲ್ಲ. ಪ್ರೇಮ, ವಿರಹ, ಅವಮಾನ, ನಿರಾಸೆ, ಹತಾಶೆ, ಹೋರಾಟ, ಸೇಡು ಎಲ್ಲವೂ ಈ ಮಾರ್ಗದಲ್ಲಿದ್ದವು.

ಶಾಲಾ ದಿನಗಳಲ್ಲೇ ನೃತ್ಯ ತರಬೇತಿ ಪಡೆದಿದ್ದ ಜಯಲಲಿತಾ ಅವರು, 14ನೇ ವಯಸ್ಸಿನಲ್ಲಿ ರಂಗಪ್ರವೇಶಿಸಿದರು. ಹೀಗೆಯೇ ಮುಂದುವರಿದ ನೃತ್ಯ ಅವರ ಜೀವನ ಸಿನಿಮಾ ರಂಗದಲ್ಲಿ ಮತ್ತು ರಾಜಕೀಯ ರಂಗದಲ್ಲಿ ಅತಿ ಎತ್ತರಕ್ಕೆ ಕೊಂಡೊಯ್ಯಲು ಸಹಕಾರಿಯಾಯಿತು.

1948ರ ಫೆಬ್ರುವರಿ 24ರಂದು ಜನನ
ಮೇಲುಕೋಟೆಯ ಜಯರಾಮನ್, ಸಂಧ್ಯಾ ದಂಪತಿಗೆ ಜನಿಸಿದ ಜೆ. ಜಯಲಲಿತಾ ಹುಟ್ಟು ಹೆಸರು ಕೋಮಲವಲ್ಲಿ. ತಾತ (ತಂದೆಯ ತಂದೆ) ಮೈಸೂರು ಒಡೆಯರ್ ಬಳಿ ಕೆಲಸ ಮಾಡುತ್ತಿದ್ದರಿಂದ ಜಯಲಲಿತಾ ಎಂದು ಮರುನಾಮಕರಣ ಮಾಡಲಾಗಿತ್ತು.

ಸತತ ಎರಡನೇ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಹುಟ್ಟಿದ್ದು ಮೈಸೂರಿನ ಕೃಷ್ಣರಾಜೇಂದ್ರ ಆಸ್ಪತ್ರೆಯ ಸಮುಚ್ಚಯದಲ್ಲಿರುವ ಚೆಲುವಾಂಬ ಆಸ್ಪತ್ರೆಯಲ್ಲಿ.

1950
ಜಯಲಲಿತಾ ಅವರ ತಂದೆ ಜಯರಾಂ ಅವರು 1952ರಲ್ಲಿ ನಿಧನ ಹೊಂದಿದರು. ಆಗ ಜಯಲಲಿತಾ ಅವರಿಗೆ ಕೇವಲ 4 ವರ್ಷ.

1952
ಜಯಲಲಿತಾ ಕುಟುಂಬ ಮೈಸೂರಿನಿಂದ ಬೆಂಗಳೂರಿಗೆ ಹೋಗಿ ನೆಲೆಸುತ್ತದೆ. ಬೆಂಗಳೂರಿನ ಬಿಷಪ್ ಕಾಟನ್ ಬಾಲಕಿಯರ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದರು. ಆ ಸಮಯದಲ್ಲಿ ಇವರ ತಾಯಿ ಸಂಧ್ಯಾ ಅವರ ಸೋದರಿ ವಿದ್ಯಾ ಅಥವಾ ಅಂಬುಜಾ ಅವರು ಗಗನಸಖಿಯಾಗಿದ್ದರು. ಜೊತೆಗೆ, ಸಿನಿಮಾಗಳಲ್ಲಿ ನಟಿಸುತ್ತಿದ್ದರು.

1958
ಸಿನಿಮಾ ವೃತ್ತಿ ಜೀವನ ಪ್ರಾರಂಭಿಸಿದ ವಿದ್ಯಾ ಅವರು ಸೋದರಿ ಸಂಧ್ಯಾ ಅವರನ್ನು ಮದರಾಸಿನಲ್ಲಿ ನೆಲಸಲು ಆಹ್ವಾನಿಸಿದರು. ಅಂತೆಯೇ, ಇವರೊಂದಿಗೆ ತಾಯಿ ಮದರಾಸಿಗೆ ಮಕ್ಕಳೊಂದಿಗೆ ಬೆಂಗಳೂರಿನಿಂದ ಹೋದರು. ಬಳಿಕ ಮೈಸೂರಿನಲ್ಲಿದ್ದ ಆಸ್ತಿಪಾಸ್ತಿಯನ್ನು ಮಾರಾಟ ಮಾಡಿದರು. ಮೈಸೂರಿನ ಲಕ್ಷ್ಮಿಪುರಂನ ಎರಡನೇ ಮೇನ್‌ನಲ್ಲಿದ್ದ ಲಲಿತಾ ವಿಲಾಸ, ರಾಮವಿಲಾಸ ಮನೆಗಳು ಹಾಗೂ ಸರಸ್ವತಿಪುರಂನ ಮೊದಲನೇ ಮೇನ್‌ನ 3ನೇ ಕ್ರಾಸ್‌ನಲ್ಲಿರುವ ಮನೆಯನ್ನು ಜಯವಿಲಾಸ್ ಎಂದು ಕರೆಯುತ್ತಿದ್ದರು. ಇದನ್ನು ಜಯಲಲಿತಾರಿಗೆಂದೇ ಖರೀದಿಸಿದ್ದರು. ಇದನ್ನು ಮಾರಾಟ ಮಾಡಿದ್ದರು. ಹೀಗಾಗಿ, ಜಯಲಲಿತಾ ವಿದ್ಯಾಭ್ಯಾಸ ಮದರಾಸಿನಲ್ಲಿ ಮುಂದುವರೆಯಿತು.

1964
ಚಿನ್ನದ ಗೊಂಬೆ ಕನ್ನಡ ಚಿತ್ರದಲ್ಲಿ ನಾಯಕ ನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ. ನಂತರ ಹಲವು ತಮಿಳು ಚಿತ್ರಗಳಲ್ಲಿ ಅಭಿನಯ

1965-80
ಚಿತ್ರರಂಗದಲ್ಲಿ ಅತಿ ಹೆಚ್ಚು ಬೇಡಿಕೆಯ ನಟಿಯಾಗಿ ಹಾಗೂ ದೇಶದಲ್ಲಿಯೇ ಅತ್ಯಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿ ಎಂಬ ಗೌರವಕ್ಕೆ ಪಾತ್ರ. ಜಯಲಲಿತಾ ಒಟ್ಟಾರೆ 140ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದು, ಈ ಪೈಕಿ ಅವರು ಅಭಿನಯಿಸಿದ್ದ 120ಕ್ಕೂ ಹೆಚ್ಚು ಚಿತ್ರಗಳು ಹಿಟ್ ಆಗಿದ್ದವು.

1970
ತಮಿಳು ಚಿತ್ರರಸಿಕರ ಆರಾಧ್ಯದೈವ ಎಂಜಿಆರ್ ಸಹವರ್ತಿ, ತೆರೆಯ ಮೇಲೆ ಮತ್ತು ತೆರೆಯ ಹೊರಗೆ ಅವರ ಸಂಗಾತಿಯಾಗುವುದರ ಮೂಲಕ ತಮಿಳರ ಪ್ರೀತಿ ಗಳಿಸಿದರು. ಜಯಲಲಿತಾ ಎಂಜಿಆರ್ ನಿಧನಾ ನಂತರ ಎಐಎಡಿಎಂಕೆ ಪಕ್ಷದ ಸೂತ್ರಗಳನ್ನು ತನ್ನ ಕೈಗೆ ತೆಗೆದುಕೊಳ್ಳಲು ಹೆಚ್ಚು ಶ್ರಮಪಡಬೇಕಾಗಲಿಲ್ಲ.

1971
ಜಯಲಲಿತಾ ಅವರ ತಾಯಿ ನಿಧನ

ಜಯಾ ರಾಜಕೀಯ ಹಾದಿ…
1983
ಜಯಲಿಲಿತಾ ಅವರು ಎಐಎಡಿಎಂಕೆ ಪ್ರಚಾರ ಕಾರ್ಯದರ್ಶಿಯಾಗಿ ನೇಮಕ

1984
ಎಐಎಡಿಎಂಕೆಯಿಂದ ರಾಜ್ಯಸಭೆಗೆ ಆಯ್ಕೆಯಾದ ಜಯಾ, ಸಂಸತ್‌ನಲ್ಲಿ ಮಾಡಿದ ನಿರರ್ಗಳ ಭಾಷಣಕ್ಕೆ ಅಂದಿನ ಪ್ರಧಾನಿ ಇಂದಿರಾ ಗಾಂಧಿ ತಲೆದೂಗಿದ್ದರು.

1986
ಪ್ರತ್ಯೇಕ ರಾಜಕೀಯ ಪಕ್ಷ ಸ್ಥಾಪಿಸಿದ ಜಯಲಲಿತಾ ಅವರನ್ನು ಎಂಜಿಆರ್ ಎಐಎಡಿಎಂಕೆಯ ಎಲ್ಲಾ ಹುದ್ದೆಗಳಿಂದ ವಜಾಗೊಳಿಸಿದ್ದರು.

1987
ಎಂಜಿಆರ್ ನಿಧನ

1989
ಎಂಜಿಆರ್ ನಿಧನದ ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು. ತಮಿಳುನಾಡಿನ ಮೊದಲ ಪ್ರತಿಪಕ್ಷದ ನಾಯಕಿಯಾಗಿ ಜಯಾ ಆಯ್ಕೆ

1991
ಮೊದಲ ಬಾರಿಗೆ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ

1991- 1996
ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ ಆರೋಪ. ದತ್ತು ಪುತ್ರ ಸುಧಾಕರನ್ ಅದ್ದೂರಿ ಮದುವೆ.

2001
ಭ್ರಷ್ಟಾಚಾರ ಆರೋಪದ ಸಾಭೀತಾಗುವ ಮೊದಲ ಎರಡನೇ ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರಿ

ಅತ್ಯಂತ ಜನಪ್ರಿಯತೆಯುಳ್ಳ ಮುಖ್ಯಮಂತ್ರಿ
ಜಯಲಲಿತಾ ಅವರು ದಕ್ಷಿಣ ಭಾರತದಲ್ಲೇ ಅತ್ಯಂತ ಜನಪ್ರಿಯತೆಯುಳ್ಳ ಮುಖ್ಯಮಂತ್ರಿಯಾಗಿದ್ದು, ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅವರಿಗೆ ಶಿಕ್ಷೆಯಾಗಿದ್ದು ಕೇಳಿ ಇಡೀ ತಮಿಳುನಾಡು ಶೋಕ ಸಾಗರದಲ್ಲಿ ಮುಳುಗಿತ್ತು. ಅಘೋಷಿತ ಬಂದ್ ಆಚರಿಸಲಾಗಿದೆ. ಜಯಲಲಿತಾ ಅವರಿಗೆ ಶಿಕ್ಷೆಯಾದ ಸುದ್ದಿ ಕೇಳಿದ ನಂತರ 15 ಜನರಿಗೆ ಹೃದಯಾಘಾತವಾಗಿದ್ದು, ಇದುವರೆಗೂ ಅತ್ಮಹತ್ಯೆಮಾಡಿಕೊಂಡವರೂ ಸೇರಿ ಒಟ್ಟು 25 ಬೆಂಬಲಿಗರು ಮೃತಪಟ್ಟಿದ್ದಾರೆ. ಇದು ಅವರ ಬೆಂಬಲಿಗರು ತಮ್ಮ ನಾಯಕಿಯ ಮೇಲೆ ಇಟ್ಟಿರುವ ಅಸಾಧಾರಣ ನಿಷ್ಠೆ ಮತ್ತು ಪ್ರೀತಿಯನ್ನೂ ತೋರಿಸುತ್ತದೆ. ಅಲ್ಲದೆ ಅಮ್ಮನ ಜನಪ್ರಿಯ ಆಡಳಿತವನ್ನು ತೋರಿಸುತ್ತದೆ.

Comments are closed.