ರಾಷ್ಟ್ರೀಯ

ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಇನ್ನಿಲ್ಲ; ಮುಗಿಲು ಮುಟ್ಟಿದ ಅಭಿಮಾನಿಗಳ ಆಕ್ರಂದನ

Pinterest LinkedIn Tumblr

jayalalita

ಚೆನ್ನೈ: ಸುಮಾರು ಎರಡು ತಿಂಗಳಿನಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳರ ಪಾಲಿನ ಪ್ರೀತಿಯ ‘ಅಮ್ಮ’ ಜಯರಾಮನ್ ಜಯಲಲಿತಾ(68) ಸೋಮವಾರ ರಾತ್ರಿ 11.30ಕ್ಕೆ ನಿಧನರಾದರು.

ತೀವ್ರ ಜ್ವರ ಹಾಗೂ ನಿರ್ಜಲೀಕರಣದಿಂದ ಬಳಲುತ್ತಿದ್ದ 68 ವರ್ಷದ ಜಯಲಲಿತಾ ಅವರನ್ನು ಕಳೆದ ಸೆಪ್ಟೆಂಬರ್ 22ರಂದು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸುದೀರ್ಘ ಎರಡು ತಿಂಗಳ ಚಿಕಿತ್ಸೆಯ ನಂತರವೂ ಚೇತರಿಸಿಕೊಳ್ಳದ ಅಮ್ಮ ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ತಮಿಳುನಾಡು ಮುಖ್ಯಮಂತ್ರಿಯ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಮಾತನಾಡುತ್ತಿದ್ದಾರೆ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ. ಪ್ರತಾಪ್ ಸಿ.ರೆಡ್ಡಿ ಅವರು ಹೇಳಿದ್ದರು. ಆದರೆ ಭಾನುವಾರ ಸಂಜೆ ಹೃದಯ ಸ್ತಂಭನಕ್ಕೆ ತುತ್ತಾದ ಅವರು ಚಿಂತಾಜನಕ ಸ್ಥಿತಿ ತಲುಪಿದ್ದರು. ನಿನ್ನೆ ಬೆಳಗ್ಗೆ ಇಸಿಎಂಒ ಉಪಕರಣದ ನೆರವಿನ ಮೂಲಕ ಆಮ್ಲಜನಕವನ್ನು ಪೂರೈಸಲಾಗುತ್ತಿತ್ತು. ಆದರೆ ರಾತ್ರಿ ವೇಳೆಗೆ ಅವರ ದೇಹ ಯಾವುದೇ ಚಿಕಿತ್ಸೆಗೆ ಫಲಿಸದೆ ನಿಧನರಾಗಿದ್ದಾರೆ.

ಸತತ ಎರಡನೇ ಬಾರಿ ಹಾಗೂ ಒಟ್ಟು ಆರು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರು ಮೂಲತ ಕನ್ನಡದವರಾದರೂ ಕೋಟ್ಯಾಂತರ ತಮಿಳರ ಹೃದಯಗಳಲ್ಲಿ ಪ್ರೀತಿಯ ‘ಅಮ್ಮ’ನಾಗಿ ಹಾಗೂ ಎಐಎಡಿಎಂಕೆ ಕಾರ್ಯಕರ್ತರ ಪುರಚ್ಚಿ ತಲೈವಿ(ಕ್ರಾಂತಿಕಾರಿ ನಾಯಕಿ)ಯಾಗಿ ಸ್ಥಾನ ಪಡೆದಿದ್ದರು.

ದಕ್ಷಿಣ ಭಾರತದ ಅತಿ ಪ್ರಭಾವಿ ನಾಯಕಿ ಹಾಗೂ ಜನಪ್ರಿಯ ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ಅಕಾಲಿಕ ನಿಧನದಿಂದಾಗಿ ಇಡೀ ತಮಿಳುನಾಡು ಶೋಕ ಸಾಗರದಲ್ಲಿ ಮುಳುಗಿದೆ.

Comments are closed.