ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಲಿದೆ. ತೈಲ ರಫ್ತು ಮಾಡುವ ದೇಶಗಳ ಸಂಘಟನೆ(ಒಪೆಕ್) ಸಭೆಯಲ್ಲಿ ಪ್ರತಿದಿನ 12 ಲಕ್ಷ ಬ್ಯಾರಲ್ ತೈಲ ಉತ್ಪಾದನೆ ಕಡಿತಗೊಳಿಸಲು ಒಮ್ಮತ ಮೂಡಿದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿದೆ.
ಈಗ ಒಂದು ಬ್ಯಾರಲ್ ಕಚ್ಚಾ ತೈಲ ತೈಲದ ಬೆಲೆ 53 ಡಾಲರ್ ತಲುಪಿದೆ. ಕಳೆದ 16 ತಿಂಗಳಿನಲ್ಲಿ ದಾಖಲಾದ ಗರಿಷ್ಠ ಬೆಲೆ ಏರಿಕೆ ಇದಾಗಿದ್ದು, ಡಿಸೆಂಬರ್ ಮಧ್ಯದಲ್ಲಿ ಭಾರತೀಯ ತೈಲ ಕಂಪೆನಿಗಳು ಬೆಲೆಯನ್ನು ಪರಿಷ್ಕರಿಸುವ ಸಂದರ್ಭದಲ್ಲಿ ಬೆಲೆ ಏರಿಕೆಯಾಗಲಿದೆ.
ಜಾಗತಿಕ ಹಣಕಾಸು ಸಂಸ್ಥೆ ಗೋಲ್ಡ್ ಮನ್ ಸ್ಯಾಚ್ 2017ರ ಜನವರಿ ವೇಳೆಗೆ ಒಂದು ಬ್ಯಾರಲ್ ತೈಲದ ಬೆಲೆ 55 ಡಾಲರ್ಗೆ ತಲುಪಲಿದೆ ಎಂದು ಅಂದಾಜಿಸಿದೆ.
ತೈಲ ಉತ್ಪಾದನೆ ಕಡಿತದ ಜೊತೆ ಭಾರತದಲ್ಲಿ ಡಾಲರ್ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಲಿದೆ.
ಉತ್ಪಾದನೆ ಎಷ್ಟು ಕಡಿತಗೊಂಡಿದೆ?
ಕಳೆದ 8 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆ ಕಡಿತಗೊಳಿಸುವ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ನವೆಂಬರ್ 30ರಂದು ಒಪೆಕ್ ಕೇಂದ್ರ ಕಚೇರಿ ಇರುವ ಆಸ್ಟ್ರಿಯಾದ ವಿಯೆನ್ನಾದಲ್ಲಿ ಈ ವಿಚಾರದ ಬಗ್ಗೆ ಮಹತ್ವದ ಸಭೆ ನಡೆಯಿತು.
ಈ ಸಭೆಯಲ್ಲಿ ಪ್ರತಿದಿನ ಉತ್ಪಾದನೆಯಾಗುತ್ತಿದ್ದ 337 ಲಕ್ಷ ಬ್ಯಾರೆಲ್ ಬದಲಾಗಿ 325 ಲಕ್ಷ ಬ್ಯಾರೆಲ್ ತೈಲ ಉತ್ಪಾದಿಸಲು ದೇಶಗಳಿಂದ ಒಪ್ಪಿಗೆ ಸಿಕ್ಕಿದೆ. ಈ ನಿರ್ಣಯದಿಂದಾಗಿ ಸೌದಿ ಅರೆಬೀಯಾ, ಇರಾಕ್, ಕುವೈತ್ ದೇಶಗಳಲ್ಲಿ ಹೆಚ್ಚಿನ ಪ್ರಮಾಣದ ತೈಲ ಉತ್ಪಾದನೆ ಕಡಿತಗೊಂಡಿದೆ.
ಒಪೆಕ್ ರಾಷ್ಟ್ರಗಳ ನಡುವೆ ಒಮ್ಮತ ಸಾಧ್ಯವಾಗದ ಕಾರಣ ತೈಲ ಬೆಲೆ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ದರ 12 ವರ್ಷದಲ್ಲೇ ಮೊದಲ ಬಾರಿಗೆ 2016ರ ಫೆಬ್ರವರಿಯಲ್ಲಿ 30 ಡಾಲರ್ ಗೆ ಕುಸಿದಿತ್ತು. ಈ ಬೆಲೆಗೆ ತಲುಪಿದ ಕಾರಣ ಒಪೆಕ್ ರಾಷ್ಟ್ರಗಳು ತೈಲ ಬೆಲೆಯಲ್ಲಿ ಸಮತೋಲನ ಕಾಪಾಡಲು ಈಗ ಈ ಒಪ್ಪಂದಕ್ಕೆ ಬಂದಿದೆ.
ಪ್ರತಿ 15 ದಿನಗಳಿಗೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ದರವನ್ನು ನೋಡಿಕೊಂಡು ಭಾರತೀಯ ತೈಲ ಕಂಪೆನಿಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಪರಿಷ್ಕರಿಸುತ್ತಿರುತ್ತವೆ. ನವೆಂಬರ್ 30ರಂದು ಪ್ರತಿ ಲೀಟರ್ ಪೆಟ್ರೋಲ್ ಬೆಲೆ 13 ಪೈಸೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 12 ಪೈಸೆ ಇಳಿಕೆಯಾಗಿತ್ತು.
Comments are closed.