ಮೊಹಾಲಿ: ಕಳೆದ ವರ್ಷ ಆವಿಷ್ಕಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಶಂಸೆಗೆ ಪಾತ್ರವಾಗಿದ್ದ ಯುವ ಎಂಜಿನಿಯರ್ ಒಬ್ಬ, ತನ್ನ ಸಹಚರರೊಂದಿಗೆ ಖೋಟಾ 2000 ರೂ. ನೋಟುಗಳನ್ನು ಮುದ್ರಿಸಿ, ಚಲಾವಣೆ ಮಾಡುವಾಗ ಪಂಜಾಬಿನ ಮೊಹಾಲಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು, ಬಂಧನಕ್ಕೆ ಒಳಗಾಗಿದ್ದಾನೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಮೊಹಾಲಿಯ ಪೊಲೀಸರು ಅಭಿನವ್ ವರ್ಮಾ ಮತ್ತು ಅವನ ದಾಯಾದಿ ವಿಶಾಖ ವರ್ಮಾ ಹಾಗು ಲೂಧಿಯಾನ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಸುಮನ್ ನಾಗಪಾಲ್ ನಿಂದ ೪೨ ಲಕ್ಷ ಮೌಲ್ಯದ ೨೦೦೦ ರೂ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ತ್ರಿವಳಿಗಳು ಜನರ ಹಳೆಯ ನಿಷೇಧಿತ 500 ಮತ್ತು 10000 ರು ನೋಟುಗಳನ್ನು 30% ಕಮಿಷನ್ ಆಧಾರದ ಮೇಲೆ ಬದಲಾಯಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ತ್ರಿವಳಿ ಉಪಯೋಗಿಸುತ್ತಿದ್ದ ನೂತನ ಅದ್ದೂರಿ ಆಡಿ ಎಸ್ ಯು ವಿ ಕಾರ್ ನಿಂದ ಈ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವುದಾಗಿ ಮೊಹಾಲಿ ಪೊಲೀಸ್ ಸೂಪರಿಂಟೆಂಡೆಂಟ್ ಪರ್ಮಿಂದರ್ ಸಿಂಗ್ ಹೇಳಿದ್ದಾರೆ. ಈ ಎಸ್ ಯು ವಿ ಮೇಲೆ ವಿವಿಐಪಿ ವ್ಯಕ್ತಿಗಳು ಬಳಸುವ ಕೆಂಪು ದೀಪವನ್ನು ಕೂಡ ಅಳವಡಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
“ಸೆನ್ಸಾರ್ ಗಳನ್ನು ಉತ್ಪನ್ನ ಮಾಡಿ ಅವುಗಳನ್ನು ಅಂಧರು ಬಳಸುವ ಕೋಲುಗಳಲ್ಲಿ ಅಳವಡಿಸುವ ವ್ಯವಹಾರ ಮಾಡುತ್ತಿದ್ದ ಎಂಜಿನಿಯರಿಂಗ್ ಪದವೀಧರ ಅಭಿನವ್ ಚಂಢೀಘರ್ ನ ತನ್ನ ಕಚೇರಿಯಲ್ಲಿಯೇ 2000 ರೂ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ” ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಭಿನವ್ (21) ಮತ್ತು ಎಂಬಿಎ ವಿದ್ಯಾರ್ಥಿ ವಿಶಾಖ (23) ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರೆ, ರಿಯಲ್ ಎಸ್ಟೇಟ್ ಉದ್ದಿಮೆದಾರ ಹಳೆ ನೋಟುಗಳನ್ನು ಬದಲಿಸಿಕೊಳ್ಳುವ ಜನರನ್ನು ಕರೆತರುತ್ತಿದ್ದ ಎಂದು ಪೊಲೀಸರು ಹೇಳಿದ್ದು “ವಶಪಡಿಸಿಕೊಂಡಿರುವ ನೋಟುಗಳು ಒಂದೇ ಸರಣಿ ಸಂಖ್ಯೆ ಹೊಂದಿವೆ” ಎಂದಿದ್ದಾರೆ.
ಅಭಿನವ್ ತನ್ನ ಹೊಸ ಆವಿಷ್ಕಾರದಿಂದ ಕಳೆದ ವರ್ಷ ಮೋದಿ ಅವರ ಮೆಚ್ಚುಗೆಗೆ ಪಾತ್ರನಾಗಿದ್ದಲ್ಲದೆ, ಬೆಂಗಳೂರಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮಾವೇಶದಲ್ಲಿಯೂ ಮೋದಿ ಅವನ ಬಗ್ಗೆ ಪ್ರಸ್ತಾಪಿಸಿ ಪ್ರಶಂಸಿಸಿದ್ದರು.
ಅಭಿನವ್ ಸಿದ್ಧಪಡಿಸಿದ್ದ ಸೆನ್ಸಾರ್ ‘ಮೇಕ್ ಇನ್ ಇಂಡಿಯಾ’ ಯೋಜನೆಯಲ್ಲಿ ಸಿದ್ಧವಾದ ಆವಿಷ್ಕಾರ ಎಂದು ಬಣ್ಣಿಸಿ ಅದನ್ನು ೧೫ ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು.