ಹೊಸದಿಲ್ಲಿ, ನ.26: ಇದು ದೇಶದ ನ್ಯಾಯಾಂಗ ಇತಿಹಾಸದಲ್ಲೇ ಪ್ರಥಮ. ಆರು ತಿಂಗಳ ಎರಡು ಹಸುಳೆಗಳು ಹಾಗೂ 14 ತಿಂಗಳ ಪುಟ್ಟ ಮಗು ತಮ್ಮ ವಕೀಲರ ಮೂಲಕ ಸುಪ್ರೀಂಕೋರ್ಟ್ ಮೆಟ್ಟಲೇರಿದ ಪ್ರಕರಣ. ಕೊನೆಗೂ ಈ ಪುಟ್ಟ ಮಕ್ಕಳ ಮೊರೆಗೆ ಸುಪ್ರೀಂಕೋರ್ಟ್ ಸ್ಪಂದಿಸಿದೆ. ಅರ್ಜುನ್ ಗೋಪಾಲ್, ಆರವ್ ಭಂಡಾರಿ ಹಾಗೂ ಝೋಲಾ ರಾವ್ ಭಾಸಿನ್ ಅವರ ಒಂದು ವರ್ಷದ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದೆ. ದೆಹಲಿ ಎನ್ಸಿಆರ್ ವ್ಯಾಪ್ತಿಯಲ್ಲಿ ಪಟಾಕಿ ನಿಷೇಧಿಸಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಈ ಪುಟ್ಟಮಕ್ಕಳು, ತಂದೆ ವಕೀಲರ ಮೂಲಕ ಸುಪ್ರೀಂಕೋರ್ಟ್ನಲ್ಲಿ ದಾವೆ ಸಲ್ಲಿಸಿ, ಮಾಲಿನ್ಯ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ಸಂವಿಧಾನದ 21ನೆ ವಿಧಿಯಲ್ಲಿ ನೀಡಿರುವ ಸ್ವಚ್ಛಗಾಳಿಯನ್ನು ಪಡೆಯುವ ಹಕ್ಕಿನ ಅನ್ವಯ ಈ ಮನವಿ ಸಲ್ಲಿಸಲಾಗಿತ್ತು.
“ನಮ್ಮ ಶ್ವಾಸಕೋಶ ಪರಿಪೂರ್ಣವಾಗಿ ಬೆಳೆದಿಲ್ಲ. ಪಟಾಕಿ ಒಡೆಯುವುದರಿಂದ ಆಗುವ ಇನ್ನಷ್ಟು ಮಾಲಿನ್ಯವನ್ನು ಸಹಿಸಿಕೊಳ್ಳುವ ಸ್ಥಿತಿಯಲ್ಲಿ ನಾವಿಲ್ಲ” ಎಂದು ಮೂರು ಹಸುಳೆಗಳು ತಮ್ಮ ಅರ್ಜಿಯಲ್ಲಿ ವಿವರಿಸಿ, ದಸರಾ ಹಾಗೂ ದೀಪಾವಳಿ ಸಂದರ್ಭದಲ್ಲಿ ಪಟಾಕಿ ನಿಷೇಧ ಕೋರಿದ್ದರು. ಇದರ ಜತೆಗೆ ಭಾರತ್-5 ವಿಧಿಗಳನ್ನು ವಾಹನಗಳಿಗೆ ಕಡ್ಡಾಯ ಮಾಡುವ ಮೂಲಕ ರಾಜಧಾನಿಯ ಗಾಳಿ ಮತ್ತಷ್ಟು ಮಲಿನವಾಗದಂತೆ ತಡೆಯಬೇಕು ಎಂದು ಮನವಿ ಮಾಡಲಾಗಿತ್ತು.
ಸುಪ್ರೀಂಕೋರ್ಟ್ನ ನಿಯಮಾವಳಿ ಅನ್ವಯ, ಅಪ್ರಾಪ್ತ ವಯಸ್ಸಿನವರು ತಮ್ಮ ಮೂಲಭೂತ ಹಕ್ಕುಗಳ ರಕ್ಷಣೆ ಕೋರಿ ತಮ್ಮ ಪೋಷಕರು ಅಥವಾ ಪಾಲಕರ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ. ಕಳೆದ ವಾರ ಸುಪ್ರೀಂಕೋರ್ಟ್, ಪಟಾಕಿ ನಿಷೇಧದ ತೀರ್ಪು ನೀಡಲು ನಿರಾಕರಿಸಿತ್ತು. ಆದರೆ ರಾಜಧಾನಿಯಲ್ಲಿ ವಾಯು ಗುಣಮಟ್ಟ ಹದಗೆಡುತ್ತಲೇ ಬಂದಿರುವ ಹಿನ್ನೆಲೆಯಲ್ಲಿ, ಕೋರ್ಟ್ಗೆ ಇದೀಗ ಬೇರೆ ಆಯ್ಕೆಯೇ ಇಲ್ಲದಂತಾಗಿದ್ದು, ಎನ್ಸಿಆರ್ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟ ಹಾಗೂ ಸಿಡಿಸುವುದನ್ನು ನಿಷೇಧಿಸಿದೆ.
ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಹಾಗೂ ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಎಸ್.ಎ.ಬೋಬ್ಡೆ ಅವರನ್ನು ಒಳಗೊಂಡ ಪೀಠ ಈ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನ ಮೂಲಕ ವಿವಾಹ ಹಾಗೂ ಹಬ್ಬ ಹರಿದಿನಗಳ ಸಂಭ್ರಮವನ್ನು ಆಚರಿಸುವ ವಿಧಾನ ಬದಲಾಗಬೇಕು ಎನ್ನುವುದು ನಮ್ಮ ಆಶಯ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

Comments are closed.