ರಾಷ್ಟ್ರೀಯ

ನೋಟು ನಿಷೇಧದಿಂದ ಕೇಂದ್ರ ಸರ್ಕಾರಕ್ಕೆ 3 ಲಕ್ಷ ಕೋಟಿ ಲಾಭ?

Pinterest LinkedIn Tumblr

noteನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧ ನಿರ್ಧಾರದಿಂದ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕೇಂದ್ರ ಸರ್ಕಾರಕ್ಕೆ ಬರೊಬ್ಬರಿ 3 ಲಕ್ಷ ಕೋಟಿ ರು.ಹಣ ಲಾಭವಾಗಲಿದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.
500 ಮತ್ತು 1000 ನೋಟುಗಳ ನಿಷೇಧದಿಂದ ದೇಶದಲ್ಲಿ ಕಪ್ಪುಹಣ ಸಮಸ್ಯೆ ನಿವಾರಣೆಯಾಗುತ್ತದೆಯೇ ಎಂಬ ವಿಚಾರದ ಕುರಿತು ದೇಶಾದ್ಯಂತ ಭಾರಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರದ ಮಹತ್ವದ ನಿರ್ಣಯದಿಂದ ಭಾರತೀಯ ರಿಸರ್ವ್ ಬ್ಯಾಂಕಿಗೆ ಭರ್ಜರಿ ಲಾಭವಾಗಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಒಂದು ಮೂಲದ ಪ್ರಕಾರ ನೋಟು ನಿಷೇಧಿಸುವ ಪ್ರಧಾನಿ ಮೋದಿ ಅವರ ನಿರ್ಣಯದಿಂದ ಆರ್ ಬಿಐಗೆ 3 ಲಕ್ಷ ಕೋಟಿ ಹಣ ಲಾಭವಾಗಲಿದೆಯಂತೆ.
ಕೇಂದ್ರ ಸರ್ಕಾರದ ನೋಟು ನಿಷೇಧ ನಿರ್ಧಾರ ಹೇಗೆ ಆರ್ ಬಿಐಗೆ ಲಾಭದಾಯಕವಾಗಲ್ಲದು?
ಹಳೆಯ ನೋಟುಗಳು ಅಮಾನ್ಯ
ಕೇಂದ್ರ ಸರ್ಕಾರ ಹಳೆಯ 500 ಮತ್ತು 1000 ರು.ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದು, ಅವುಗಳ ಬದಲಾವಣೆ ಮಾರ್ಚ್ 2017ರವೆರಗೂ ಕಾಲಾವಕಾಶ ನೀಡಿದೆ. ಹೀಗಾಗಿ ಮಾರ್ಚ್ 2017ರ ಬಳಿಕ ಜನರ ಬಳಿ ಇರುವ ಹಳೆಯ ನೋಟುಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳಲಿದೆ. 2017 ಮಾರ್ಚ್ ತಿಂಗಳ ಬಳಿಕ ಅವು ಚಲಾವಣೆಯಾಗುವುದಿಲ್ಲ.
ಹೊಸ ನೋಟುಗಳಿಗೆ ಬದಲಾವಣೆಯಾಗದ ಕಪ್ಪುಹಣ
ಮೂಲಗಳ ಪ್ರಕಾರ ದೇಶಾದ್ಯಂತ 500 ಮತ್ತು 1000 ರು.ಮುಖಬೆಲೆಯ ಸುಮಾರು 14 ಲಕ್ಷ ಕೋಟಿ ರು. ನಗದು ಹಣ ಚಲಾವಣೆಯಾಗುತ್ತಿದ್ದು, ಪ್ರಸ್ತುತ ಈ ನೋಟುಗಳ ನಿಷೇಧದಿಂದ ಈ ಎಲ್ಲ ನೋಟುಗಳು ಬ್ಯಾಂಕಿಗೆ ಬರಲೇ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನು ಒಂದು ಮೂಲದ ಪ್ರಕಾರ ಪ್ರಸ್ತುತ ಚಲಾವಣೆಯಲ್ಲಿರುವ 14 ಲಕ್ಷ ಕೋಟಿ ರು.ಹಣದಲ್ಲಿ ಸುಮಾರು 3 ಲಕ್ಷ ಕೋಟಿ ರು.ಹಣ ನಕಲಿ ನೋಟುಗಳು ಹಾಗೂ ಕಪ್ಪುಹಣದಿಂದ ಕೂಡಿದೆ. ಪ್ರಸ್ತುತ ಕೇಂದ್ರ ಸರ್ಕಾರದ ನೋಟು ನಿಷೇಧದಿಂದಾಗಿ ಈ ಹಣ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಕಾಳಧನಿಕರು ತಮ್ಮ ಬಳಿ ಇರುವ ಈ ಹಣವನ್ನು ಬದಲಿಸಿಕೊಳ್ಳಲು ಮುಂದಾದರೆ ಆಗ ಅವರು ಸಿಕ್ಕಿ ಬೀಳುತ್ತಾರೆ. ಅಲ್ಲದೆ ಅವರಿಗೆ ಕಠಿಣ ಶಿಕ್ಷೆ ಕೂಡ ಆಗುವ ಸಾಧ್ಯತೆಗಳಿವೆ. ಹೀಗಾಗಿ ಸಾಕಷ್ಟು ಕಾಳಧನಿಕರು ತನ್ನ ಕಪ್ಪುಹಣವನ್ನು ಬದಲಿಸಿಕೊಳ್ಳಲು ಮುಂದಾಗಿ ಸಿಕ್ಕಿ ಬೀಳಬಹುದು ಅಥವಾ ಬದಲಿಸಿಕೊಳ್ಳದೆಯೇ ಇರಬಹುದು. ಆಗ ಆರ್ ಬಿಐ ಗೆ 3 ಲಕ್ಷ ಕೋಟಿ ರು.ಲಾಭವಾಗಲಿದೆ ಎಂದು ಹೇಳಲಾಗುತ್ತಿದೆ.
ಲಾಭ ಹೇಗೆ?
ಪ್ರಸ್ತುತ ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದಿಂದಾಗಿ ದೇಶಾದ್ಯಂತ ಹಂಚಿಹೋಗಿರುವ ಸುಮಾರು 3 ಲಕ್ಷ ಕೋಟಿ ಕಪ್ಪುಹಣ ಹಾಗೂ ನಕಲಿ ನೋಟುಗಳು ಅಮಾನ್ಯಗೊಳ್ಳಲ್ಲಿದ್ದು, ಅವುಗಳ ಸ್ಥಾನಕ್ಕೆ ಸರ್ಕಾರ ಇತ್ತೀಚೆಗೆ ಬಿಡುಗಡೆ ಮಾಡಿರುವ ನೂತನ ನೋಟುಗಳು ಚಲಾವಣೆಗೊಳ್ಳಲಿವೆ. ಒಂದು 2000 ರು.ಮುಖಬೆಲೆಯ ಹೊಸ ನೋಟಿಗೆ 3.50ರು.ನಿಂದ 3.95 ರು.ಗಳು ವ್ಯಯವಾಗಲಿದೆ. ಅಂತೆಯೇ ಹೊಸ 500 ರು. ಮುಖಬೆಲೆಯ ನೋಟಿಗೂ ಹೆಚ್ಚು ಕಡಿಮೆ ಅದೇ ವೆಚ್ಚವಾಗುತ್ತದೆ. ಪ್ರಸ್ತುತ ಅಮಾನ್ಯಗೊಳ್ಳಲಿರುವ ಈ 3 ಲಕ್ಷ ಕೋಟಿ ರು. ಕಪ್ಪುಹಣ ಮತ್ತು ನಕಲಿ ನೋಟುಗಳ ಬದಲಿಗೆ ಮಾನ್ಯಗೊಂಡ ಹೊಸ 500 ಮತ್ತು 2000ರು.ಮುಖಬೆಲೆಯ ನೋಟುಗಳು ಸೇರ್ಪಡೆಯಾಗಲಿದ್ದು, ಇದು ಸರ್ಕಾರಕ್ಕೆ ಲಾಭಾಂಶವಾಗಲಿದೆ ಎಂದು ಹೇಳಲಾಗುತ್ತಿದೆ.
ಲಾಭಾಂಶದ ಹಣ ಕೇಂದ್ರ ಸರ್ಕಾರಕ್ಕೆ!
ಇನ್ನು ಈ ರೀತಿ ಬಂದ ಲಾಭಾಂಶದ ಹಣವನ್ನು ಆರ್ ಬಿಐ ಕೇಂದ್ರ ಸರ್ಕಾರಕ್ಕೆ ನೀಡುತ್ತದೆ. ಸರ್ಕಾರ ಈ ಹಣವನ್ನು ಶೌಚಾಲಯ ನಿರ್ಮಾಣ, ರಸ್ತೆ ಅಭಿವೃದ್ಧಿಯಂತಹ ದೇಶದ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ವಿನಿಯೋಗಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ.
ಒಟ್ಟಾರೆ ಕಳೆದ ನವೆಂಬರ್ 8ರಂದು ನೋಟು ನಿಷೇಧಿಸಿದ ಕೇಂದ್ರ ಸರ್ಕಾರದ ನಡೆ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಪರ ಮತ್ತು ವಿರೋಧ ಚರ್ಚೆಗಳು ತಾರಕ್ಕೇರಿರುವಂತೆಯೇ ನೋಟು ನಿಷೇಧದಿಂದ ಆರ್ ಬಿಐಗೆ ಲಾಭ ಎಂಬ ಈ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Comments are closed.