ರಾಷ್ಟ್ರೀಯ

ಸಾಕಷ್ಟು ಹೊಸ ನೋಟುಗಳು ಲಭ್ಯ: ಆರ್‍ ಬಿ ಐ

Pinterest LinkedIn Tumblr

RBIWEBನವದೆಹಲಿ: ಬ್ಯಾಂಕ್‍ಗಳಲ್ಲಿ ನೋಟು ಬದಲಾಯಿಸಿಕೊಳ್ಳಲು ಹೋದರೆ ಅಲ್ಲಿಯೂ ದುಡ್ಡಿಲ್ಲ, ಎಟಿಎಂಗಳೂ ಕಾರ್ಯ ನಿರ್ವಹಿಸುತ್ತಿಲ್ಲ. ಹಳೇ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬದಲಿಸಲು ಜನರು ಕಷ್ಟಪಡುತ್ತಿದ್ದಾರೆ. ಕೆಲವೊಂದು ಬ್ಯಾಂಕ್‍ಗಳಲ್ಲಿ ನಾಗರಿಕರು ಬ್ಯಾಂಕ್ ಸಿಬ್ಬಂದಿಗಳ ಮೇಲೆ ಕೂಗಾಡುತ್ತಾರೆ. ಕೈಯಲ್ಲಿ ದುಡ್ಡಿಲ್ಲದೆ, ಕೈಯಲ್ಲಿರುವ ದುಡ್ಡು ಖರ್ಚು ಮಾಡಲಾಗದೆ ಹೊಸ ನೋಟಿಗಾಗಿ ಜನರು ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ.

ಕಳೆದೆರಡು ದಿನಗಳಿಂದ ಸಾಮಾನ್ಯ ಜನರ ದಿನಚರಿಯೂ ಬದಲಾದಂತೆ ಕಾಣುತ್ತಿದೆ. ಈ ಎಲ್ಲ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ನಾಗರಿಕರು ತಾಳ್ಮೆಯಿಂದಿರುವಂತೆ ಮನವಿ ಮಾಡಿದೆ. ಬ್ಯಾಂಕ್‍ಗಳಲ್ಲಿ ಸಾಕಷ್ಟು ನಗದು ಲಭ್ಯವಾಗಲಿದೆ. ಈ ನಗದು ದೇಶದ ಎಲ್ಲ ಜನರಿಗೆ ತಲುಪುವಂತೆ ಮಾಡುತ್ತೇವೆ ಎಂದು ಆರ್ ಬಿ ಐ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.

ಮಂಗಳವಾರ 500 ಮತ್ತು 1000 ನೋಟುಗಳನ್ನು ರದ್ದು ಮಾಡಿರುವುದಾಗಿ ಪ್ರಧಾನಿ ಮೋದಿ ಹೇಳಿದ ನಂತರ ಬುಧವಾರ ಮತ್ತು ಗುರುವಾರ ಎಟಿಎಂಗಳು ಬಂದ್ ಆಗಿದ್ದವು. ಶುಕ್ರವಾರ ಎಟಿಎಂ ಕಾರ್ಯವೆಸಗಿದರೂ, ಅದರಲ್ಲಿ ಸಾಕಷ್ಟು ಹಣವಿರಲಿಲ್ಲ. ಅಷ್ಟೇ ಅಲ್ಲದೆ ಎಟಿಎಂನಿಂದ ದಿನಕ್ಕೆ ರು, 2000 ಮಾತ್ರ ವಿತ್ ಡ್ರಾ ಮಾಡಬಹುದಾಗಿದೆ.

ಆರ್ ಬಿ ಐ ಪ್ರಕಟಣೆಯಲ್ಲಿ ಏನಿದೆ?
ರು. 2000 ದ ಹೊಸ ನೋಟುಗಳನ್ನು ಈಗಾಗಲೇ ದೇಶದೆಲ್ಲೆಡೆ ಲಭ್ಯವಾಗುವಂತೆ ಮಾಡಲಾಗಿದೆ. ಈಗಾಗಲೇ ಎಲ್ಲ ಬ್ಯಾಂಕ್‍ಗಳು ನವೆಂಬರ್ 10, 2016ರಿಂದ ಹಳೆಯ ನೋಟುಗಳನ್ನು ಬದಲಾಯಿಸಿಕೊಳ್ಳಲು ನಾಗರಿಕರಿಗೆ ಸಹಾಯ ಮಾಡುತ್ತಿವೆ. ಸದ್ಯ ಎಟಿಎಂಗಳಲ್ಲಿ ಹಣ ತುಂಬಲು ಕಾಲಾವಕಾಶದ ಅಗತ್ಯವಿದ್ದು, ಒಂದ್ಸಾರಿ ಎಟಿಎಂನಲ್ಲಿ ಹಣ ತುಂಬಿ, ಎಟಿಎಂ ಕಾರ್ಯ ನಿರ್ವಹಿಸಿದರೆ ನವೆಂಬರ್ 18, 2016ರ ವರೆಗೆ ಓರ್ವ ವ್ಯಕ್ತಿಗೆ ಪ್ರತಿದಿನ ರು. 2000 ವರೆಗೆ ಹಣ ವಿತ್ ಡ್ರಾ ಮಾಡಬಹುದಾಗಿದೆ.

ನಾಗರಿಕರು ತಾಳ್ಮೆಯಿಂದಿರಬೇಕು. ಡಿಸೆಂಬರ್ 30, 2016ರ ವರೆಗೆ ನಿಮ್ಮಲ್ಲಿರುವ ಹಳೇ 500 ಮತ್ತು 1000 ರುಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಕಾಲಾವಕಾಶವಿದೆ.

Comments are closed.