ರಾಷ್ಟ್ರೀಯ

ಹೊಸ ನೋಟುಗಳ ಮೇಲೆ ದೇವನಾಗರಿ ಅಂಕಿ: 1960ರ ರಾಷ್ಟ್ರಪತಿ ಆದೇಶ ಉಲ್ಲಂಘನೆ!

Pinterest LinkedIn Tumblr

2000-100-front-a-fiನವದೆಹಲಿ: ಕೇಂದ್ರ ಸರ್ಕಾರ ಹಳೆಯ ₹500 ಮತ್ತು ₹1,000 ಮುಖಬೆಲೆಯ ನೊಟುಗಳ ಚಲಾವಣೆಯನ್ನು ರದ್ದುಗೊಳಿಸಿ ಹೊಸ ₹ 500 ಮತ್ತು ₹ 2,000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿರುವುದು ಭಾಷಾ ಚರ್ಚೆಗೆ ಮರುಹುಟ್ಟು ನೀಡಿದೆ.

ಹೊಸ ನೋಟುಗಳಲ್ಲಿ ದೇವನಾಗರಿ ಅಂಕಿಗಳ ಬಳಕೆಯ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿವೆ. ಅಲ್ಲದೆ ಹೊಸ ನೋಟುಗಳ ಮೇಲೆ ದೇವನಾಗರಿ ಅಂಕಿಗಳನ್ನು ಮುದ್ರಿಸಿರುವುದು ಅಧಿಕೃತ ಭಾಷೆಗಳ ಸಂಸದೀಯ ಸಮಿತಿಯ (1957) ಶಿಫಾರಸು ಹಾಗೂ 1960ರ ರಾಷ್ಟ್ರಪತಿ ಆದೇಶಕ್ಕೆ ವಿರುದ್ಧವಾಗಿದೆ

1955ರಲ್ಲಿ ಬಿ.ಜಿ. ಕೇಹರ್‌ ಅಧ್ಯಕ್ಷತೆಯಲ್ಲಿ ಅಧಿಕೃತ ಭಾಷೆಗಳ ಆಯೋಗವನ್ನು ರಚಿಸಲಾಗಿತ್ತು. ಈ ಆಯೋಗ ಸರ್ಕಾರಿ ಪ್ರಕಟಣೆಗಳಲ್ಲಿ ಅಂಕಿಗಳ ಬಳಕೆಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಶಿಫಾರಸು ಮಾಡಿರಲಿಲ್ಲ.

ಕೇಹರ್‌ ಆಯೋಗದ ಶಿಫಾರಸುಗಳನ್ನು ಪರಾಮರ್ಶಿಸಿ ಹೆಚ್ಚುವರಿ ಶಿಫಾರಸುಗಳನ್ನು ಸಲ್ಲಿಸಲು 1957ರಲ್ಲಿ ಜಿ.ಬಿ. ಪಂತ್‌ ಅಧ್ಯಕ್ಷತೆಯಲ್ಲಿ ಅಧಿಕೃತ ಭಾಷೆಗಳ ಸಂಸದೀಯ ಸಮಿತಿಯನ್ನು ರಚಿಸಲಾಯಿತು.

ಈ ಸಂಸದೀಯ ಸಮಿತಿ ಶಿಫಾರಸುಗಳ ಆಧಾರದ ಮೇಲೆ 1960ರ ಏಪ್ರಿಲ್‌ 27ರಂದು ರಾಷ್ಟ್ರಪತಿಯವರು ಹಿಂದಿ ಹಾಗೂ ಪ್ರಾದೇಶಿಕ ಭಾಷೆಗಳ ಕುರಿತಾಗಿ ಆದೇಶವೊಂದನ್ನು ಹೊರಡಿಸಿದ್ದರು.

1960ರ ರಾಷ್ಟ್ರಪತಿ ಆದೇಶದ ಪ್ರಕಾರ, ‘ಕೇಂದ್ರ ಸರ್ಕಾರದ ಇಲಾಖೆಗಳ ಹಿಂದಿ ಭಾಷೆಯ ಪ್ರಕಟಣೆಗಳ ವಿಷಯಕ್ಕೆ ಅನುಗುಣವಾಗಿ ದೇವನಾಗರಿ ಅಂಕಿ ಹಾಗೂ ಜತೆಗೆ ಅಂತರರಾಷ್ಟ್ರೀಯ (ಇಂಗ್ಲಿಷ್‌) ಅಂಕಿ ಬಳಸಬಹುದು. ಉಳಿದಂತೆ ವಿಜ್ಞಾನ, ತಂತ್ರಜ್ಞಾನ ಮತ್ತು ಅಂಕಿಸಂಖ್ಯೆಯ ಎಲ್ಲಾ ಪ್ರಕಟಣೆಗಳಲ್ಲಿ ಅಂತರರಾಷ್ಟ್ರೀಯ (ಇಂಗ್ಲಿಷ್‌) ಅಂಕಿಗಳನ್ನೇ ಬಳಸಬೇಕು’.

ಹೊಸ ನೋಟುಗಳ ಮುದ್ರಣದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಈ ಯಾವ ಅಂಶಗಳನ್ನೂ ಗಣನೆಗೆ ತೆಗೆದುಕೊಳ್ಳದೆ ಹಿಂದಿ ಭಾಷೆ ಹಾಗೂ ದೇವನಾಗರಿ ಅಂಕಿಯ ಹೇರಿಕೆಗೆ ಮುಂದಾಗಿದೆ ಎಂಬ ಮಾತುಗಳು ಈಗ ಕೇಳಿಬರುತ್ತಿವೆ.

ಇದಲ್ಲದೆ ಹಳೆಯ ನೋಟುಗಳಲ್ಲಿ ಹಿಂದಿ ಭಾಷೆಯ ಅಕ್ಷರಗಳು ಅಂಕಿಯ ಕೆಳಭಾಗದಲ್ಲಿದ್ದರೆ ಹೊಸ ನೋಟುಗಳಲ್ಲಿ ಮೇಲ್ಭಾಗದಲ್ಲೇ ಹಿಂದಿ ಭಾಷೆಯ ಅಕ್ಷರಗಳಿವೆ. ಈ ಮೂಲಕ ಹಿಂದಿಯನ್ನು ಮೆರೆಸಿ ಪ್ರಾದೇಶಿಕ ಭಾಷೆಗಳನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ನೋಟುಗಳನ್ನು ಬಳಸಿಕೊಳ್ಳುತ್ತಿದೆ ಎಂದು ಹಲವರು ದೂರಿದ್ದಾರೆ.

Comments are closed.