ನವದೆಹಲಿ: ಸಾಂಪ್ರದಾಯಿಕ ವಿವಾದಿತ ಕ್ರೀಡೆ ಜಲ್ಲಿಕಟ್ಟಿಗೆ ಅವಕಾಶ ನೀಡುವ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ಪ್ರಾಣಿಗಳ ಮೇಲೆ ಕ್ರೌರ್ಯಕ್ಕೆ ಅವಕಾಶ ನೀಡುವುದಿಲ್ಲ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.
ಜಲ್ಲಿಕಟ್ಟು ಕ್ರೀಡಿಗೆ ಅವಕಾಶ ನೀಡಿ ಕೇಂದ್ರ ಸರ್ಕಾರ ಜನವರಿ 8ರಂದು ಹೊರಡಿಸಿದ್ದ ಅಧಿಸೂಚನೆ ವಿರುದ್ಧ ಎನ್ ಜಿಒಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರ ಹಾಗೂ ನ್ಯಾಯಮೂರ್ತಿ ಆರ್.ಎಫ್.ನಾರಿಮನ್ ಅವರನ್ನೊಳಗೊಂಡ ಪೀಠ, ಪ್ರಾಣಿಗಳಿಗೆ ಹಕ್ಕುಗಳಿಲ್ಲವೆಂದ ಮಾತ್ರಕ್ಕೆ ಮನುಷ್ಯರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವಂತಿಲ್ಲ ಎಂದು ಎಚ್ಚರಿಸಿದ್ದಾರೆ.
ಗ್ಲಾಡಿಯೇಟರ್ ನಂತ ಹಿಂಸಾತ್ಮಕ ರೋಮನ್ ಕ್ರೀಡೆ ನಮಗೆ ಅವಶ್ಯಕತೆಯಿಲ್ಲ. ಕಂಪ್ಯೂಟರ್ ನಲ್ಲೇ ಗೂಳಿ ಕಾಳಗದಂಥ ಆಟವನ್ನು ಆಡಬಹುದು ಎಂದಾದಾಗ, ಜೀವಂತ ಎತ್ತುಗಳನ್ನು ಹಿಂಸಿಸುವ ಅಗತ್ಯವೇನಿದೆ ಎಂದು ಕೋರ್ಟ್ ಪ್ರಶ್ನಿಸಿದೆ.
2014, ಮೇ 7ರಂದು ಜಲ್ಲಿಕಟ್ಟು ನಿಷೇಧಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಕೇವಲ ಅಧಿಸೂಚನೆಯೊಂದನ್ನು ಹೊರಡಿಸುವ ಮೂಲಕ ರದ್ದುಪಡಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತಿಳಿಸಿದೆ.
ಇನ್ನು ಜಲ್ಲಿಕಟ್ಟು ಕ್ರೀಡೆಯನ್ನು ಸಮರ್ಥಿಸಿಕೊಂಡ ತಮಿಳುನಾಡು ವಕೀಲ ಶೇಖರ್ ನಾಫಡೆ ಅವರು, ಮನುಷ್ಯರು ಮ್ಯಾರಾಥನ್ ಓಡಬಹುದಾದರೆ ಎತ್ತುಗಳನ್ನು ಓಟಕ್ಕೆ ಏಕೆ ಬಳಸಿಕೊಳ್ಳಬಾರದು ಎಂದು ಪ್ರಶ್ನಿಸಿದರು. ಇದಕ್ಕೆಉತ್ತರಿಸಿದ ನ್ಯಾಯಾಧೀಶರು, ಮನುಷ್ಯರಿಗೆ ರನ್ನಿಂಗ್ ರೇಸ್ ಮಾಡುವಂತೆ ಯಾರೂ ಒತ್ತಾಯ ಮಾಡುವುದಿಲ್ಲ. ಅದು ಅವರ ಸ್ವಯಿಚ್ಛೆ. ಆದರೆ ಎತ್ತುಗಳನ್ನು ಬಲವಂತವಾಗಿ ಕ್ರೀಡೆಗೆ ಬಳಸಿಕೊಳ್ಳುತ್ತೇವೆ ಎಂದು ಹೇಳಿ, ವಿಚಾರಣೆಯನ್ನು ಡಿ.26ಕ್ಕೆ ಮುಂದೂಡಿದ್ದಾರೆ.