ರಾಷ್ಟ್ರೀಯ

1952ರ ಲಂಡನ್‌ನ್ನು ಆವರಿಸಿದ್ದ ಹೊಂಜಿನ ಸ್ಥಿತಿ ನೆನಪಿಸುವ ದೆಹಲಿ

Pinterest LinkedIn Tumblr

hogeನವದೆಹಲಿ : ದೆಹಲಿಯನ್ನು ಆವರಿಸಿಕೊಂಡಿರುವ ದಟ್ಟ ಹೊಂಜು, 1952ರಲ್ಲಿ ಲಂಡನ್‌ ನಗರವನ್ನು ಆವರಿಸಿದ್ದ ಹೊಂಜಿನ ನೆನಪು ತರಿಸುವಂತಿದೆ.

ಗಾಳಿಯಲ್ಲಿನ ಮಾಲಿನ್ಯಕಾರಕ ಕಣಗಳಾದ ಪಿಎಂ 2.5 ಮತ್ತು ಪಿಎಂ 10ರ ಪ್ರಮಾಣ ಹಲವು ಪ್ರದೇಶಗಳಲ್ಲಿ ‘ಸುರಕ್ಷಿತ’ ಎನ್ನಬಹುದಾದ ಮಿತಿಗಿಂತ 17 ಪಟ್ಟು ಹೆಚ್ಚಾಗಿದೆ. ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ‘ಸಫರ್’ ಸಂಸ್ಥೆಯವರ ಉಸ್ತುವಾರಿಯಲ್ಲಿರುವ ಗಾಳಿಯ ಗುಣಮಟ್ಟ ಸೂಚಕಗಳು 500ಕ್ಕಿಂತ ಹೆಚ್ಚಿನ ಅಂಶ ತೋರಿಸುತ್ತಿದ್ದವು. ಅಂದರೆ, ಗರಿಷ್ಠ ಮಿತಿಗಿಂತ ಹೆಚ್ಚಾಗಿ ಗಾಳಿ ಮಲಿನಗೊಂಡಿದೆ ಎಂದರ್ಥ.

ನಗರದ ವಾತಾವರಣದಲ್ಲಿ ಸಲ್ಫರ್‌ ಡೈಆಕ್ಸೈಡ್‌ ಪ್ರಮಾಣ ನಿಯಂತ್ರಣದಲ್ಲಿದೆ. ಆದರೆ, ಮಾಲಿನ್ಯಕಾರಕ ಕಣಗಳ ಗಾತ್ರ ಮತ್ತಿತರ ಮಾನದಂಡಗಳನ್ನು ಆಧರಿಸಿ ಹೇಳುವುದಾದರೆ, ಈಗ ದೆಹಲಿಗೆ ಎದುರಾಗಿರುವ ಸ್ಥಿತಿಯು ಲಂಡನ್‌ ನಗರ ಹಿಂದೆ ಎದುರಿಸಿದ ಸ್ಥಿತಿಯಷ್ಟೇ ಕೆಟ್ಟದಾಗಿದೆ ಎಂದು ತಜ್ಞರು ಹೇಳುತ್ತಾರೆ. ಲಂಡನ್‌ ನಗರಕ್ಕೆ ಹೊಂಜು ಆವರಿಸಿದ್ದ ಕಾರಣ ನಾಲ್ಕು ಸಾವಿರ ಜನ ಅಕಾಲಿಕ ಸಾವನ್ನಪ್ಪಿದ್ದರು.

‘ಲಂಡನ್‌ ನಗರದ ವಾತಾವರಣದಲ್ಲಿ 1952ರಲ್ಲಿ ಮಾಲಿನ್ಯಕಾರಕ ಕಣಗಳ ಪ್ರಮಾಣ ಪ್ರತಿ ಘನ ಅಡಿಗೆ 500 ಮೈಕ್ರೊ ಗ್ರಾಂನಷ್ಟು ಇತ್ತು. ಇಂದು ದೆಹಲಿಯಲ್ಲಿ ಸಲ್ಫರ್‌ ಡೈಆಕ್ಸೈಡ್‌ ಪ್ರಮಾಣ, ಲಂಡನ್‌ನಲ್ಲಿ ಆಗ ಇದ್ದಷ್ಟು ಇಲ್ಲ. ಆದರೆ, ದೀಪಾವಳಿಯ ದಿನ ಆದಂತೆ, ವಾತಾವರಣದಲ್ಲಿ ಬೇರೆ ಅನಿಲಗಳ ಪ್ರಮಾಣ ಹೆಚ್ಚಾಗಿದೆ. ಇದೊಂದು ರೀತಿಯಲ್ಲಿ ವಿಷಕಾರಿ ಮಿಶ್ರಣ. ಮಾಲಿನ್ಯಕಾರಕ ವಸ್ತುಗಳು ದೀರ್ಘ ಕಾಲ ವಾತಾವರಣದಲ್ಲಿದ್ದರೆ ದೆಹಲಿಯಲ್ಲೂ ಅಕಾಲಿಕ ಸಾವು ಸಂಭವಿಸಬಹುದು’ ಎಂದು ವಿಜ್ಞಾನ ಮತ್ತು ಪರಿಸರ ಕೇಂದ್ರದ (ಸಿಎಸ್‌ಇ) ಅನುಮಿತ್ರಾ ರಾಯಚೌಧರಿ ಹೇಳಿದರು.

ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ವರ್ಷ ಸಂಭವಿಸುವ 10 ಸಾವಿರದಿಂದ 30 ಸಾವಿರ ಸಾವುಗಳಿಗೆ ವಾಯು ಮಾಲಿನ್ಯವೇ ಕಾರಣ ಎಂದು ಸಿಎಸ್‌ಇ ವರದಿಯೊಂದು ಹೇಳಿದೆ.

ಭಾನುವಾರ ಮಧ್ಯಾಹ್ನ 4 ಗಂಟೆಯ ವೇಳೆಗೆ ಗಾಳಿಯ ಗುಣಮಟ್ಟದ ಸೂಚ್ಯಂಕವು 497 ಅಂಕಿಯನ್ನು ತೋರಿಸುತ್ತಿತ್ತು. ದೀಪಾವಳಿ ನಂತರದ ಮಾಲಿನ್ಯಕ್ಕೆ ಹೋಲಿಸಿದರೂ, ಇದು ಈ ಬಾರಿಯ ಅತ್ಯಂತ ಹೆಚ್ಚಿನ ವಾಯು ಮಾಲಿನ್ಯದ ದಿನ.

ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿಯ (ಡಿಪಿಸಿಸಿ) ಮಾಪಕದ ಅನ್ವಯ, ಆನಂದ ವಿಹಾರ್ ಪ್ರದೇಶದಲ್ಲಿ ಮಾಲಿನ್ಯಕಾರಕ ಪಿಎಂ 10 (10 ಮೈಕ್ರೊಮೀಟರ್‌ ಸುತ್ತಳತೆಯ ಒರಟಾದ ದೂಳಿನ ಕಣ) ಪ್ರಮಾಣ ಬೆಳಿಗ್ಗೆಯ ಸಮಯದಲ್ಲಿ ಪ್ರತಿ ಘನ ಮೀಟರ್‌ಗೆ 1,690 ಆಗಿತ್ತು. ಅನಂತರ ತುಸು ಕಡಿಮೆ ಆದ ಈ ಪ್ರಮಾಣ, ಮಧ್ಯಾಹ್ನದ ನಂತರ ಮತ್ತೆ ಜಾಸ್ತಿಯಾಯಿತು.

ದೆಹಲಿಯನ್ನು ಈಗ ಆವರಿಸಿರುವಷ್ಟು ಪ್ರಮಾಣದ ಹೊಂಜು ಕಳೆದ 17 ವರ್ಷಗಳ ಅವಧಿಯಲ್ಲಿ ಕಂಡುಬಂದಿರಲಿಲ್ಲ. ಹೊಂಜಿನ ಪರಿಸ್ಥಿತಿ ನಿಭಾಯಿಸಲು ದೆಹಲಿ ಸರ್ಕಾರ ಕೈಗೊಂಡ ತುರ್ತು ಕ್ರಮಗಳಾದ ಶಾಲೆಗಳಿಗೆ ರಜೆ ಘೋಷಣೆ, ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಗಿತವನ್ನು ಸಿಎಸ್‌ಇ ಸ್ವಾಗತಿಸಿದೆ. ಆದರೆ ವಾಹನಗಳ ಸಂಚಾರಕ್ಕೆ ಮಿತಿ ಹೇರದಿರುವುದರ ಬಗ್ಗೆ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ. ‘ತುರ್ತಾಗಿ ಸ್ಪಂದಿಸಬೇಕಾದ ಸ್ಥಿತಿ ಒಂದು ವಾರದಿಂದ ಇದೆ. ಆದರೆ ಈಗ ಕೈಗೊಂಡಿರುವ ಕ್ರಮಗಳು, ತೀರಾ ಸಂಕಷ್ಟದ ಸ್ಥಿತಿಯನ್ನು ತುಸು ತಗ್ಗಿಸುವ ಗುರಿಯನ್ನು ಮಾತ್ರ ಹೊಂದಿವೆ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದು ಅನುಮಿತ್ರಾ ಹೇಳಿದರು.

ಬೀಜಿಂಗ್‌ನಲ್ಲೂ ವಾಯು ಮಾಲಿನ್ಯ ಸಂಕಷ್ಟ
ಚೀನಾದ ರಾಜಧಾನಿ ಬೀಜಿಂಗ್‌ ಕಳೆದ ವರ್ಷಾಂತ್ಯದಲ್ಲಿ ಹೊಂಜಿನಿಂದ ಮುಚ್ಚಿಹೋಗಿತ್ತು. ಅಲ್ಲಿನ ನಗರ ಆಡಳಿತವು, ‘ಮನೆಯಿಂದ ಹೊರಬರುವುದನ್ನು ಕಡಿಮೆ ಮಾಡಿ. ಹೊಂಜು ಆವರಿಸಿದೆ’ ಎಂಬ ಸಂದೇಶವನ್ನು ನಗರವಾಸಿಗಳ ಮೊಬೈಲ್‌ಗೆ ರವಾನಿಸಿತ್ತು.

ಆ ಸಂದರ್ಭದಲ್ಲಿ ಬೀಜಿಂಗ್‌ನಲ್ಲಿ ಶುದ್ಧ ಗಾಳಿ ಮಾರಾಟ ಮಾಡುವ ಕಂಪೆನಿಗಳೂ ಹುಟ್ಟಿಕೊಂಡಿದ್ದವು! ಚೀನಾದ ಹೊಂಜು ಅಮೆರಿಕದ ಕ್ಯಾಲಿಫೊರ್ನಿಯಾವರೆಗೂ ಪ್ರಭಾವ ಬೀರಿತ್ತು ಎಂಬ ವರದಿಗಳಿವೆ.

ಚೀನಾದ ವಾಣಿಜ್ಯ ರಾಜಧಾನಿ ಎನ್ನಲಾಗುವ ಶಾಂಘೈನಲ್ಲೂ ಭಾನುವಾರ ಹೊಂಜು ಆವರಿಸಿಕೊಂಡಿದೆ ಎಂದು ಅಲ್ಲಿನ ಸೌತ್‌ ಚೀನಾ ಮಾರ್ನಿಂಗ್‌ ಪೋಸ್ಟ್‌ ಪತ್ರಿಕೆ ವರದಿ ಮಾಡಿದೆ. ದಟ್ಟ ಹೊಂಜಿನಿಂದಾಗಿ ರಸ್ತೆ ಸರಿಯಾಗಿ ಕಾಣುತ್ತಿಲ್ಲ. ಭಾನುವಾರ ಅಲ್ಲಿ ನಡೆದ ರಸ್ತೆ
ಅಪಘಾತದಲ್ಲಿ ಒಂಬತ್ತು ಜನ ಸತ್ತಿದ್ದಾರೆ ಎಂದು ಪತ್ರಿಕೆ ಹೇಳಿದೆ.

Comments are closed.