ಹೈದರಾಬಾದ್: ಭಾರತ ಮತ್ತು ಚೀನಾ ರಾಷ್ಟ್ರೀಯ ಭದ್ರತಾ ಅಧಿಕಾರಿಗಳು ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಭಯೋತ್ಪಾದನೆ ನಿಗ್ರಹ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್- ಚೀನಾ ರಾಷ್ಟ್ರೀಯ ಭದ್ರತಾ ಸಲಹೆಗಾರರು ಭಯೋತ್ಪಾದನೆ ನಿಗ್ರಹದ ವಿಷಯದ ಬಗ್ಗೆ ಚರ್ಚೆ ನಡೆಸಿದ್ದಾರೆಯಾದರು, ವಿಶ್ವಸಂಸ್ಥೆಯಲ್ಲಿ ಹಲವು ದಿನಗಳಿಂದ ಭಾರತದ ಬೇಡಿಕೆಯಾಗಿರುವ ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಗೆ ನಿಷೇಧ ವಿಧಿಸುವ ವಿಚಾರವಾಗಿ ಚರ್ಚೆ ನಡೆಸಿರುವುದರ ಬಗ್ಗೆ ಅಧಿಕೃತ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿಲ್ಲ. ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಭಾರತದ ಯತ್ನಕ್ಕೆ ಚೀನಾ ಎರಡು ಬಾರಿ ವಿಶ್ವಸಂಸ್ಥೆಯಲ್ಲಿ ಅಡ್ಡಿ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುವುದು ಅಗತ್ಯವಾಗಿತ್ತು.
ಹೈದರಾಬಾದ್ ನಲ್ಲಿ ಉಭಯ ದೇಶಗಳ ಅಧಿಕಾರಿಗಳು ಮಾತುಕತೆ ನಡೆಸಿದ್ದು, ಚೀನಾ ರಾಷ್ಟ್ರೀಯ ಭದ್ರತಾ ಸಲಹೆಗಾರರು ಕಳೆದ 2 ತಿಂಗಳುಗಳಲ್ಲಿ ಮೂರನೇ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ” ಚೀನಾ ಭಾರತದ ನಡುವೆ ಸೌಹಾರ್ದಯುತ ಚರ್ಚೆ ನಡೆದಿದ್ದು, ದ್ವಿಪಕ್ಷೀಯ, ಪ್ರಾದೇಶಿಕ, ಅಂತಾರಾಷ್ಟ್ರೀಯ ವಿಷಯಗಳಲ್ಲಿ ಉಭಯ ರಾಷ್ಟ್ರಗಳ ಹಿತಾಸಕ್ತಿ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ವಿದೇಶಾಂಗ ಇಲಾಖೆ ಸಚಿವಾಲಯ ಮಾಹಿತಿ ನೀಡಿದೆ.