ರಾಷ್ಟ್ರೀಯ

ಈ ದಂಪತಿಯ ಮಗಳಿಗೆ ‘ವೈಭವಿ’ ಎಂದು ನಾಮಕರಣ ಮಾಡಿದ ಪ್ರಧಾನಿ ಮೋದಿ

Pinterest LinkedIn Tumblr

vaibhavi

ಲಖನೌ: ಅಪ್ಪನ ಹೆಸರು ಭರತ್ ಸಿಂಗ್, ಅಮ್ಮನ ಹೆಸರು ವಿಭಾ. ನಿಮ್ಮಿಬ್ಬರ ಹೆಸರೂ ಒಳಗೊಳ್ಳುವಂತೆ ‘ವೈಭವಿ’ ಎಂಬ ಹೆಸರು ಇಡಿ. ಉತ್ತರ ಪ್ರದೇಶದ ನಾಯಪುರ ಹಣಸಿಪುರ ಗ್ರಾಮದ ಸೀಖರ್ ಬ್ಲಾಕ್ನ ಭರತ್ ಸಿಂಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಫೋನ್ ಮೂಲಕ ನೀಡಿದ ಸಲಹೆ. ಪ್ರಧಾನಿ ದೂರವಾಣಿ ಮೂಲಕ ಈ ಸಲಹೆ ನೀಡಿದ್ದಷ್ಟೇ ಅಲ್ಲ, ಪತ್ರ ಮೂಲಕವೂ ಇದನ್ನು ದೃಢ ಪಡಿಸಿದ್ದಾರೆ.

ಪೂರ್ವ ಉತ್ತರ ಪ್ರದೇಶದ ಹಣಸಿಪುರ ಗ್ರಾಮದ ಈ ಯುವ ದಂಪತಿ ಆಗಸ್ಟ್ 13ರಂದು ತಮ್ಮ ಪುತ್ರಿಯ ಜನನವಾಗುವುದಕ್ಕೆ 2 ತಿಂಗಳು ಮುಂಚಿತವಾಗಿಯೇ ಪ್ರಧಾನಿಗೆ ಪತ್ರ ಬರೆದು ತಮ್ಮ ಪುತ್ರಿಗೆ ಹೆಸರು ಇಡುವಂತೆ ಕೋರಿದ್ದರು. ಹೆಣ್ಣು ಮಕ್ಕಳ ಅಭಿವೃದ್ಧಿಗೆ ಪ್ರಧಾನಿ ನೀಡಿರುವ ಆದ್ಯತೆಯಿಂದ ಪ್ರೇರಣೆಗೊಂಡು ಈ ಪತ್ರ ಬರೆದಿರುವುದಾಗಿ ತಿಳಿಸಿದ್ದರು.ಆಗಸ್ಟ್ 20ರ ರಾತ್ರಿ ಭರತ್ಗೆ ಪ್ರಧಾನಿ ಕಚೇರಿಯಿಂದ ಕರೆ ಬಂತು. ಪ್ರಧಾನಿ ಮಾತನಾಡಲಿಚ್ಛಿಸಿದ್ದಾರೆ ಎಂದು ಫೋನ್ನಲ್ಲಿ ಮಾತನಾಡಿದ ವ್ಯಕ್ತಿ ಹೇಳಿದರು. ಬಳಿಕ ಪ್ರಧಾನಿಯೇ ಎರಡೂವರೆ ನಿಮಿಷ ಮಾತನಾಡಿ, ಅಭಿನಂದಿಸಿ, ಅಪ್ಪ ಅಮ್ಮನ ಹೆಸರು ಬರುವಂತೆ ‘ವೈಭವಿ’ ಹೆಸರು ಇಡಲು ಸಲಹೆ ಮಾಡಿದರು. ಮರುದಿನ ಗ್ರಾಮಸ್ಥರಿಗೆ ಇದನ್ನು ಹೇಳಿದಾಗ ಯಾರೂ ನಂಬಲಿಲ್ಲ. ಆಗಸ್ಟ್ 22ರಂದು ಪಿಎಂಒದಿಂದ ಕರೆ ಬಂದಿದ್ದ ನಂಬರ್ಗೆ ಫೋನ್ ಮಾಡಿದ ಭರತ್ ಪ್ರಧಾನಿಯ ಸಲಹೆಯನ್ನು ಒಳಗೊಂಡ ಪತ್ರ ಕಳುಹಿಸಲು ಕೋರಿದರು. ಆಗಸ್ಟ್ 30ರಂದು ಪಿಎಂಒದಿಂದ ರಿಜಿಸ್ಟರ್ಡ್ ಪತ್ರ ಬಂತು. ಅದರಲ್ಲಿ 24ನೇ ದಿನಾಂಕ ನಮೂದಿಸಿ ‘ವೈಭವಿ’ ಹೆಸರು ಇಡುವಂತೆ ಸಲಹೆ ಮಾಡಿ ಪ್ರಧಾನಿ ಸಹಿ ಮಾಡಿದ್ದರು.

‘ನಿಮ್ಮ ಮನೆಗೆ ಮಗಳ ಆಗಮನವಾದುದಕ್ಕಾಗಿ ಅಭಿನಂದನೆಗಳು. ನೀವು ವೈಭವಿಯ ಕನಸುಗಳನ್ನು ಈಡೇರಿಸಿ, ಆಕೆ ಶಕ್ತಿಯಾಗುವಂತೆ ಮಾಡುವಿರಿ. ಶುಭ ಹಾರೈಕೆಗಳು’ ಎಂದೂ ಪ್ರಧಾನಿ ಬರೆದಿದ್ದರು. ಈ ಪತ್ರ ಬಂದ ಬಳಿಕ ಈಗ ಗ್ರಾಮಸ್ಥರೆಲ್ಲರಿಗೂ ಈ ದಂಪತಿ ಬಗ್ಗೆ ಹೆಮ್ಮೆಯ ಭಾವನೆ ಮೂಡಿದೆ. ಮಾಧ್ಯಮ ಮಂದಿ ವಿಚಾರಿಸಿದಾಗ ಪಿಎಂಒ ಕೂಡಾ ಇದನ್ನು ದೃಢ ಪಡಿಸಿದೆ ಎಂದು ವರದಿಗಳು ತಿಳಿಸಿವೆ.

Comments are closed.