ರಾಷ್ಟ್ರೀಯ

ಭಾರತ- ಪಾಕ್ ನಡುವೆ ಮತ್ತೊಂದು ಪ್ರೇಮ ವಿವಾಹ

Pinterest LinkedIn Tumblr

pakಜೈಪುರ: ಉರಿ ಸೇನಾ ನೆಲೆ ಮೇಲೆ ಉಗ್ರರ ದಾಳಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ನಿರ್ದಿಷ್ಟ ದಾಳಿ, ಭಾರತ-ಪಾಕ್ ಗಡಿ ಪ್ರದೇಶದಲ್ಲಿ ಆಗಾಗ ನಡೆಯುತ್ತಿರುವ ಗುಂಡಿನ ಚಕಮಕಿ. ದಾಳಿ ಪ್ರತಿದಾಳಿಗಳಿಂದ ಭಾರತ ಮತ್ತು ಪಾಕ್ ನಡುವೆ ಬಿಕ್ಕಟ್ಟು ಉಂಟಾಗಿದ್ದರೂ, ಉಭಯ ದೇಶಗಳ ನಡುವಿನ ಪ್ರೇಮ- ವಿವಾಹ ಸಂಬಂಧಗಳು ಮಾತ್ರ ನಿರಾತಂಕವಾಗಿ ನಡೆದು ಬರುತ್ತಿವೆ.

ಜೋಧಪುರದ ನರೇಶ್ ತೆವಾನಿ ಎಂಬಾತ ನವೆಂಬರ್ ತಿಂಗಳಲ್ಲಿ ಮದುವೆಯಾಗಲಿದ್ದು ಈತನ ಭಾವೀ ಪತ್ನಿ ಪ್ರಿಯಾ ಬಚ್ಚಾನಿ ಕರಾಚಿಯವಳು. ಭಾರತ ಮತ್ತು ಪಾಕಿಸ್ತಾನದ ರಾಜಕೀಯ ಸಂಬಂಧ ಹದಗೆಟ್ಟಿದ್ದರೂ ನಮ್ಮ ನಡುವಿನ ಸಂಬಂಧವನ್ನು ಇದು ಬಾಧಿಸಿಲ್ಲ, ನಮ್ಮ ಪ್ರೀತಿ ಗಾಢವಾಗಿದೆ ಅಂತಾರೆ ತೆವಾನಿ.

ಉರಿ ದಾಳಿಯ ನಂತರ ಭಾರತಕ್ಕೆ ಭೇಟಿ ನೀಡಲು ಬಚ್ಚಾನಿ ಕುಟುಂಬಕ್ಕೆ ಸಾಧ್ಯವಾಗಿರಲಿಲ್ಲ, ತನ್ನ ವಧುವಿನ ಕಡೆಯವರಿಗೆ ವೀಸಾ ಪಡೆಯಲು ಕಷ್ಟವಾಗುತ್ತಿದೆ ಎಂದು ಕೆಲವು ದಿನಗಳ ಹಿಂದೆ ತೆವಾನಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಟ್ವೀಟ್ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಸುಷ್ಮಾ ಸ್ವರಾಜ್, ಬಚ್ಚಾನಿ ಅವರಿಗೆ ವೀಸಾ ಸಿಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದ್ದರು.

ಗಡಿ ದಾಟಿದ ಪ್ರೇಮ
ಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾಹ ಸಂಬಂಧಗಳು ಕುದುರಿಕೊಳ್ಳುವುದೇ ಹಳೇ ಗೆಳೆತನದಿಂದ. ದೇಶ ವಿಭಜನೆಯಾದರೂ ಗಡಿಭಾಗದಲ್ಲಿರುವ ಜನರ ಸ್ನೇಹ ಸಂಬಂಧಗಳಿಗೆ ಈ ಗಡಿರೇಖೆಗಳು ಅಡ್ಡವಾಗಿಲ್ಲ, ಗಡಿಪ್ರದೇಶದಲ್ಲಿ ವಾಸವಾಗಿರುವ ಸೋಧಾ ಸಮುದಾಯದ ರಜಪೂತರಲ್ಲಿ ಭಾರತ -ಪಾಕ್ ನಡುವೆ ವಿವಾಹ ಸಂಬಂಧವೇರ್ಪಟ್ಟಿದ್ದೇ ಜಾಸ್ತಿ.

ಪಾಕಿಸ್ತಾನದಲ್ಲಿರುವ ರಜಪೂತರು ಸೋಧಾ ಸಮುದಾಯದವರಾಗಿದ್ದು, ಇವರಿಗೆ ವಿವಾಹವಾಗಬೇಕಾದರೆ ಭಾರತದವರೇ ಬೇಕು ಅಂತಾರೆ ಕನೋಟಾ ರಾಜಮನೆತನದ ಮನ್ ಸಿಂಗ್ ಕನೋಟಾ. ಕನೋಟಾ ಅವರ ಮಗಳು ಪದ್ಮಿನಿ ಕಳೆದ ವರ್ಷ ಪಾಕಿಸ್ತಾನದ ಕರ್ನೀ ಸಿಂಗ್ ಅವರನ್ನು ವಿವಾಹವಾಗಿದ್ದರು.

ಇಷ್ಟೇ ಅಲ್ಲ ರಾಜಸ್ತಾನದ ಜೈಸಲ್ಮೇರ್ ಮತ್ತು ಬಾರ್ಮರ್ ಜಿಲ್ಲೆಗಳಲ್ಲಿ ದೇಶದ ಗಡಿಯಾಚೆಗಿನ ವಿವಾಹಗಳು ಸರ್ವೇ ಸಾಮಾನ್ಯ, ಸೋಧಾ ಸಮುದಾಯ ಸೇರಿದಂತೆ ಸಿಂಧಿ ಸಮುದಾಯವರೂ ಪಾಕಿಸ್ತಾನದವರನ್ನು ಮದುವೆಯಾಗುತ್ತಾರೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿರುವ ಥರ್ಪಾರ್ಕರ್, ಮಿಥಿ ಮತ್ತು ಚಾಚ್ರೋ ಪ್ರದೇಶದ ಜನರು ಭಾರತದವರನ್ನೇ ಮದುವೆಯಾಗುತ್ತಾರೆ. ಆದರೆ ಗಡಿಯಾಚೆಗಿನ ಪ್ರೇಮ- ವಿವಾಹ ಸಂಬಂಧಗಳಿಗೆ ವೀಸಾ ದೊಡ್ಡ ಸಮಸ್ಯೆ ಅಂತಾರೆ ಇಲ್ಲಿನ ಜನ.

ಪದ್ಮಿನಿ ಮದುವೆಯಾಗಿ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಆದರೆ ಮುಂದಿನ ತಿಂಗಳು ನಡೆಯಲಿರುವ ತಮ್ಮ ಸಹೋದರನ ಮದುವೆಗೆ ಬರಲು ಪದ್ಮಿನಿಯ ಪತಿಗೆ ವೀಸಾ ಸಿಕ್ಕಿಲ್ಲ. ಹಿಂದಿನ ಕಾಲದಲ್ಲಿ ಉಭಯ ದೇಶಗಳ ಜನರ ಮದುವೆ ದಿಬ್ಬಣಕ್ಕೆ ಗಡಿರಕ್ಷಣಾ ದಳದ ಯೋಧರು ರಕ್ಷಣೆ ನೀಡುತ್ತಿದ್ದರು. ಆದರೆ ಈಗ ‘ವೀಸಾ’ ಪಡೆಯುವುದು ಅಷ್ಟು ಸುಲಭವಲ್ಲ.

ಇತ್ತ, ಭಾರತ ಮತ್ತು ಪಾಕಿಸ್ತಾನದ ಸಂಬಂಧ ಹದಗೆಟ್ಟಿದ್ದರೂ ಗಡಿರಾಜ್ಯದಲ್ಲಿರುವ ಭಾರತೀಯರು ಪಾಕಿಸ್ತಾನದೊಂದಿಗೆ ಸಂಬಂಧ ಬೆಸೆಯುವ ಮೂಲಕ ‘ಸ್ನೇಹ’ ಸಂಬಂಧವನ್ನು ಗಟ್ಟಿಯಾಗುವಂತೆ ಮಾಡುತ್ತಿದ್ದಾರೆ ಎಂಬುದಕ್ಕೆ ಈ ವಿವಾಹಗಳೇ ಸಾಕ್ಷಿ.

Comments are closed.