ರಾಷ್ಟ್ರೀಯ

ಕೇರಳದ ಸೌಮ್ಯಾ ಕೊಲೆ ಪ್ರಕರಣ: ಮಾರ್ಕಂಡೇಯ ಕಟ್ಜುಗೆ ಸುಪ್ರೀಂ ಸಮನ್ಸ್‌

Pinterest LinkedIn Tumblr

katjuನವದೆಹಲಿ: ‘ಕೇರಳದ ಸೌಮ್ಯಾ ಕೊಲೆ ಪ್ರಕರಣದಲ್ಲಿ ನಾವೆಲ್ಲಿ ತಪ್ಪು ಮಾಡಿದ್ದೇವೆ ಎಂಬುದನ್ನು ನ್ಯಾಯಾಲಯಕ್ಕೆ ಬಂದು ತಿಳಿಸಿ’ ಎಂದು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅವರಿಗೆ ಸಮನ್ಸ್‌ ಜಾರಿ ಮಾಡಿದೆ.

ನವೆಂಬರ್ 11ರಂದು ನ್ಯಾಯಾಲಯಕ್ಕೆ ಹಾಜರಾಗಿ ವಿವರಣೆ ನೀಡುವಂತೆ ಸಮನ್ಸ್‌ನಲ್ಲಿ ತಿಳಿಸಲಾಗಿದೆ.

ಕೇರಳವನ್ನು ತಲ್ಲಣಗೊಳಿಸಿದ್ದ ಸೌಮ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿ ಗೋವಿಂದಚಾಮಿಯನ್ನು ಕೊಲೆ ಆರೋಪದಿಂದ ಮುಕ್ತಗೊಳಿಸಿದ್ದ ಸುಪ್ರೀಂಕೋರ್ಟ್‌ ಆತನ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿ, ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು.

ನ್ಯಾಯಮೂರ್ತಿಗಳಾದ ರಂಜನ್‌ ಗೊಗೊಯ್‌, ಪಿ.ಸಿ. ಪಂತ್‌ ಮತ್ತು ಯು.ಯು. ಲಲಿತ್‌ ಅವರಿದ್ದ ಪೀಠ ಜೀವಾವಧಿ ಶಿಕ್ಷೆಯ ಜತೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಹೊಸ ಆದೇಶವನ್ನು ಹೊರಡಿಸಿತ್ತು.

ಜೀವಾವಧಿ ಮತ್ತು ಏಳು ವರ್ಷ ಜೈಲು ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕು ಎಂದು ಪೀಠ ತೀರ್ಪು ನೀಡಿತ್ತು. ಗೋವಿಂದಚಾಮಿ ಮೇಲಿನ ಅತ್ಯಾಚಾರ, ದರೋಡೆ ಮತ್ತು ಹಲ್ಲೆ ಆರೋಪಗಳನ್ನು ಸುಪ್ರೀಂಕೋರ್ಟ್‌ ಎತ್ತಿಹಿಡಿದಿತ್ತು.

ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ತಪ್ಪು ಆದೇಶ ನೀಡಿದೆ ಎಂದು ಮಾರ್ಕಂಡೇಯ ಕಟ್ಜು ಹೇಳಿದ್ದರು. ಈ ಬಗ್ಗೆ ಕಟ್ಜು ಅವರು ಫೇಸ್‌ಬುಕ್‌ನಲ್ಲಿ ಸೆಪ್ಟೆಂಬರ್‌ 15ರಂದು ದೀರ್ಘವಾದ ಸ್ಟೇಟಸ್‌ ಹಾಕಿದ್ದರು.

ಕಟ್ಜು ಅವರ ಈ ಆರೋಪಕ್ಕೆ ಈಗ ಸುಪ್ರೀಂಕೋರ್ಟ್‌ ಸ್ಪಷ್ಟನೆ ಕೇಳಿದೆ.

ಘಟನೆ:
2011ರ ಫೆಬ್ರುವರಿ 1 ರಂದು ನಿಧಾನವಾಗಿ ಚಲಿಸುತ್ತಿದ್ದ ಎರ್ನಾಕುಲಂ- ಶೋರನೂರ್ ರೈಲಿನಿಂದ ಸೌಮ್ಯಾ ಎಂಬ ಯುವತಿಯನ್ನು ಗೋವಿಂದಚಾಮಿ ಕೆಳಕ್ಕೆ ತಳ್ಳಿದ್ದ. ಬಳಿಕ ತಾನೂ ಕೆಳಗ್ಗೆ ಜಿಗಿದು ಆಕೆಯನ್ನು ಸಮೀಪದ ಕಾಡಿಗೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಸೌಮ್ಯಾ ಐದು ದಿನಗಳ ಬಳಿಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.

ಘಟನೆಯ ಬೆನ್ನಲ್ಲೇ ಪೊಲೀಸರು ಗೋವಿಂದಚಾಮಿಯನ್ನು ಬಂಧಿಸಿದ್ದರು. ತ್ವರಿತ ಗತಿ ನ್ಯಾಯಾಲಯ 2012ರಲ್ಲಿ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿತ್ತು. ಕೇರಳ ಹೈಕೋರ್ಟ್ ಅಧೀನ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿತ್ತು. ಆದರೆ ಸುಪ್ರೀಂಕೋರ್ಟ್‌ ಗಲ್ಲು ಶಿಕ್ಷೆಯನ್ನು ರದ್ದುಪಡಿಸಿತ್ತು.

Comments are closed.