ರಾಷ್ಟ್ರೀಯ

ದಲಿತ ಯುವಕನ ಅಪಹರಿಸಿ, ಕೊಲೆ ಗೈದು, ಕಾಲನ್ನು ಕತ್ತರಿಸಿ ಎಸೆದಿರುವ ಅಮಾನುಷ ಘಟನೆ: 6 ಮಂದಿ ವಿರುದ್ಧ ಕೇಸು

Pinterest LinkedIn Tumblr

sukhchain

ಮಾನಸಾ(ಪಂಜಾಬ್‌ ): ಶರಾಬು ಕಳ್ಳಸಾಗಾಟಗಾರರ ಎದುರಾಳಿ ಗುಂಪೊಂದು 20ರ ಹರೆಯದ ದಲಿತ ಯುವಕನೊಬ್ಬನನ್ನು ಅಪಹರಿಸಿ, ಕೊಲೆ ಗೈದು, ಆತನ ಒಂದು ಕಾಲನ್ನು ಕತ್ತರಿಸಿ ಎಸೆದಿರುವ ಅಮಾನುಷ ಘಟನೆ ಸೋಮವಾರ ಸಂಜೆ ಪಂಜಾಬಿನ ಮಾನಸಾ ಜಿಲ್ಲೆಯಲ್ಲಿ ನಡೆದಿದೆ.

ಅಪಹರಣಕ್ಕೆ ಗುರಿಯಾಗಿ ಕೊಲೆಗೀಡಾಗಿರುವ ದಲಿತ ತರುಣನನ್ನು ಸುಖಚೈನ್‌ ಸಿಂಗ್‌ ಎಂದು ಗುರುತಿಸಲಾಗಿದ್ದು ಈತನು ಮಾನಸಾ ಜಿಲ್ಲೆಯ ಘರ್‌ಗಾಮಾ ಗ್ರಾಮದವನಾಗಿದ್ದಾನೆ ಎಂದು ತಿಳಿದುಬಂದಿದೆ. ಈತ ಒಬ್ಬ ಸಣ್ಣ ಮಟ್ಟದ ಶರಾಬು ಕಳ್ಳಸಾಗಣೆಗಾರನೂ ಆಗಿದ್ದಾನೆ. ಶರಾಬು ಕಳ್ಳಸಾಗಣೆ ಮಾಡುವ ಎದುರಾಳಿ ಗುಂಪು ಹಾಗೂ ಇದೇ ಧಂಧೆಯಲ್ಲಿ ನಿರತರಾಗಿರುವ ಮೇಲ್ಜಾತಿಯ ಭೂಮಾಲಕರು ಶಾಮೀಲಾಗಿ, ದಲಿತ ಯುವಕನನ್ನು ಅಪಹರಿಸಿ ಕೊಂದಿರುವುದಾಗಿ ಶಂಕಿಸಲಾಗಿದೆ.

ಶರಾಬು ಕಳ್ಳಸಾಗಣೆ ಧಂಧೆಯನ್ನು ಕೈಬಿಡುವಂತೆ ನನ್ನ ಮಗನಿಗೆ ಎದುರಾಳಿ ಗುಂಪು ಹಲವು ಬಾರಿ ಬೆದರಿಕೆ ಹಾಕಿತ್ತು ಎಂದು ದಲಿತ ಯುವಕನ ತಂಪೆ ರೇಶಮ್‌ ಸಿಂಗ್‌ ಹೇಳಿದ್ದಾರೆ.

ಕತ್ತರಿಸಿ ಹಾಕಲಾಗಿರುವ ಮಗನ ಕಾಲು ಪತ್ತೆಯಾಗುವ ತನಕ ತಾವು ಮಗನ ಮರಣೋತ್ತರ ಪರೀಕ್ಷೆ ನಡೆಸುವುದಕ್ಕೆ ಬಿಡುವುದಿಲ್ಲ ಎಂದು ದಲಿತ ಯುವಕನ ಕುಟುಂಬದವರು ಪಟ್ಟು ಹಿಡಿದಿದ್ದಾರೆ.

ಸೋಮವಾರ ರಾತ್ರಿ ಸುಮಾರು 8.30ಕ್ಕೆ ದಲಿತ ಯುವಕ ಸುಖಚೈನ್‌ ಸಿಂಗ್‌ ತನ್ನ ಗೆಳೆಯರೊಂದಿಗೆ ಮನೆಗೆ ಮರಳುವಾಗ ಆತನ ಮೇಲೆ ಎದುರಾಳಿ ಗುಂಪಿನವರು ಹಲ್ಲೆಗೈದು ಬಳಿಕ ಆತನನ್ನು ಎತ್ತಿಕೊಂಡು ತಮ್ಮೊಂದಿಗೆ ಒಯ್ದರು. ಅನಂತರದಲ್ಲಿ ಆತನ ಶವವು ಕೊಲೆ ಆರೋಪಿಗಳಲ್ಲಿ ಒಬ್ಟಾತನಾಗಿರುವ ಬಲಬೀರ್‌ ಸಿಂಗ್‌ ಎಂಬಾತನ ಮನೆಯ ಸಮೀಪ ರಾತ್ರಿ 10 ಗಂಟೆಯ ಹೊತ್ತಿಗೆ ಪತ್ತೆಯಾಯಿತು ಎಂದು ನೆರೆಕರೆಯವರು ಹೇಳಿದ್ದಾರೆ. ಸುಖಚೈನ್‌ ಸಿಂಗ್‌ನ ಮೃತ ದೇಹದ ಒಂದು ಕಾಲು ನಾಪತ್ತೆಯಾಗಿತ್ತು ಮತ್ತು ಆತನ ದೇಹದ ತುಂಬಾ ಗಾಯಗಳು ಕಂಡು ಬಂದಿದ್ದವು ಎಂದವರು ಹೇಳಿದ್ದಾರೆ.

ಅಪಹರಣ ಹಾಗೂ ಕೊಲೆ ಆರೋಪದಲ್ಲಿ ಪೊಲೀಸರು ಬಲಬೀರ್‌ ಸಿಂಗ್‌, ಹರದೀಪ್‌ ಸಿಂಗ್‌ ಅಮನ್‌ದೀಪ್‌ ಸಿಂಗ್‌, ಸಂಧು ಸಿಂಗ್‌, ಬಾಬ್ರಿಕ್‌ ಸಿಂಗ್‌ ಮತ್ತು ಸೀತಾ ಸಿಂಗ್‌ ಎಂಬ ಆರು ಮಂದಿಯ ವಿರುದ್ಧ ಕೇಸ್‌ ಬುಕ್‌ ಮಾಡಿದ್ದಾರೆ.

Comments are closed.