ರಾಷ್ಟ್ರೀಯ

ಅದ್ದೂರಿ ದಸರಾ: ಹುತಾತ್ಮ ಯೋಧರಿಗೆ ಅವಮಾನ-ಮಾಯಾವತಿ

Pinterest LinkedIn Tumblr

mayaಲಖನೌ: ಪ್ರಧಾನಿ ನರೇಂದ್ರ ಮೋದಿ ಅವರು ಅದ್ದೂರಿ ದಸರಾ ಆಚರಿಸುವ ಮೂಲಕ ಉರಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿಗೆ ಬಲಿಯಾದ 18 ಯೋಧರನ್ನು ಅವಮಾನಿಸಿದ್ದಾರೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಆರೋಪಿಸಿದ್ದಾರೆ.

ಮಂದಿನ ವರ್ಷ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಲಾಭ ಪಡೆದುಕೊಳ್ಳಲು ಮೋದಿ ಅವರು ನಿರ್ದಿಷ್ಟ ದಾಳಿಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮಾಯಾವತಿ ಹೇಳಿದ್ದಾರೆ.

ಬಿಎಸ್‌ಪಿ ಸ್ಥಾಪಕ ಕಾನ್ಶೀರಾಂ ಅವರ 10ನೇ ಪುಣ್ಯತಿಥಿ ಅಂಗವಾಗಿ ಏರ್ಪಡಿಸಲಾಗಿದ್ದ ಭಾರಿ ಸಮಾವೇಶವನ್ನು ಉದ್ದೇಶಿಸಿ ಮಾಯಾವತಿ ಮಾತನಾಡಿದರು. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀಡಿರುವ ಯಾವ ಭರವಸೆಯನ್ನೂ ಮೋದಿ ಅವರು ಈಡೇರಿಸಿಲ್ಲ ಎಂದು ಅವರು ಹೇಳಿದ್ದಾರೆ.

ನಿರ್ದಿಷ್ಟ ದಾಳಿಯನ್ನು ರಾಜಕೀಯ ಲಾಭಕ್ಕೆ ಬಿಜೆಪಿ ಬಳಸಿಕೊಳ್ಳುತ್ತಿದೆ. ಆದರೆ ನಿರ್ದಿಷ್ಟ ದಾಳಿಯ ಕೀರ್ತಿ ಯೋಧರಿಗೆ ಸಲ್ಲಬೇಕು ಎಂದು ಅವರು ಹೇಳಿದ್ದಾರೆ.

ವಿದೇಶ ಪ್ರವಾಸದ ವಿಚಾರದಲ್ಲಿ ಮೋದಿ ಅವರು ಒಂದು ರೀತಿಯ ದಾಖಲೆ ಸೃಷ್ಟಿಸಿದ್ದಾರೆ. ಆದರೆ ದೇಶದ ವಿದೇಶಾಂಗ ನೀತಿ ಇನ್ನೂ ಅಸ್ಪಷ್ಟವಾಗಿಯೇ ಇದೆ. ‘ಗೋ ರಕ್ಷಣೆ’ ಮತ್ತು ‘ಲವ್‌ ಜಿಹಾದ್‌’ ಹೆಸರಿನಲ್ಲಿ ಕೇಂದ್ರ ಸರ್ಕಾರವು ಮುಸ್ಲಿಮರಲ್ಲಿ ಭಯ ಹುಟ್ಟಿಸಿದೆ ಎಂದು ಅವರು ಆಪಾದಿಸಿದ್ದಾರೆ.

ಉತ್ತರ ಪ್ರದೇಶದ ಅಖಿಲೇಶ್‌ ಯಾದವ್‌ ನೇತೃತ್ವದ ಸರ್ಕಾರವನ್ನೂ ಟೀಕಿಸಿದ ಮಾಯಾವತಿ, ರಾಜ್ಯದಲ್ಲಿ ‘ಗೂಂಡಾ ರಾಜ್ಯವಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಮಾಯಾವತಿ ಅವರು ಹೇಳಿದರು.

‘ಯುದ್ಧೋನ್ಮಾದ ಸೃಷ್ಟಿ ಯತ್ನ’: ಸೇನೆಯು ನಡೆಸಿದ ನಿರ್ದಿಷ್ಟ ದಾಳಿಯ ಕೀರ್ತಿ ಪಡೆದುಕೊಳ್ಳಲು ಕೇಂದ್ರ ಸರ್ಕಾರ ನಾಟಕ ಮಾಡುತ್ತಿದೆ. ರಾಜಕೀಯ ಲಾಭ ಪಡೆಯಲು ಮತ್ತು ಸರ್ಕಾರದ ವೈಫಲ್ಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ನಿರ್ದಿಷ್ಟ ದಾಳಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಮಾಯಾವತಿ ಆರೋಪಿಸಿದ್ದಾರೆ.

ನಿರ್ದಿಷ್ಟ ದಾಳಿಯ ನಂತರ ‘ಯುದ್ಧೋನ್ಮಾದ’ ಸೃಷ್ಟಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ನಿರ್ದಿಷ್ಟ ದಾಳಿ ಸರಿಯಾದ ಕ್ರಮವೇ ಆದರೂ ಅದು ಬಹಳ ವಿಳಂಬವಾಯಿತು. ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರ ದಾಳಿ ನಡೆಸಲು ವಿಳಂಬ ಮಾಡಿದೆ.

ಪಠಾಣ್‌ಕೋಟ್‌ ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದಾಗಲೇ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ನಿರ್ದಿಷ್ಟ ದಾಳಿ ನಡೆಸಬೇಕಿತ್ತು. ಹಾಗೆ ಮಾಡಿದ್ದರೆ ಉರಿಯಲ್ಲಿ 19 ಯೋಧರ ಪ್ರಾಣ ಉಳಿಯುತ್ತಿತ್ತು ಎಂದು ಮಾಯಾವತಿ ಹೇಳಿದ್ದಾರೆ.

***
‘ಕೋಮು ಭಾವನೆ ಕೆರಳಿಸುವ ಯತ್ನ’
ಉತ್ತರ ಪ್ರದೇಶದ ಚುನಾವಣಾ ಪ್ರಚಾರಕ್ಕೆ ಮಾಯಾವತಿ ಕೋಮು ಬಣ್ಣ ಬಳಿಯಲು ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ತಿರುಗೇಟು ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಮೂಲಕ ಅವರು ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಇದು ಅವರ ಮಾನಸಿಕ ದಿವಾಳಿತನ ಮತ್ತು ಹತಾಶೆಯನ್ನು ತೋರಿಸುತ್ತದೆ ಎಂದು ಬಿಜೆಪಿ ಕಾರ್ಯದರ್ಶಿ ಶ್ರೀಕಾಂತ್‌ ಶರ್ಮ ಹೇಳಿದ್ದಾರೆ.

ನಿರ್ದಿಷ್ಟ ದಾಳಿಯ ಬಗ್ಗೆ ಮಾಯಾವತಿ ಅವರು ಟೀಕೆ ಮಾಡಬಾರದು. ನಿರ್ದಿಷ್ಟ ದಾಳಿ ಜನರಲ್ಲಿ ಭಾರಿ ಉತ್ಸಾಹ ಸೃಷ್ಟಿಸಿದೆ. ಭಯೋತ್ಪಾದನೆ ವಿರುದ್ಧ ಸೇನೆ ನಡೆಸಿದ ಕಾರ್ಯಾಚರಣೆಯನ್ನು ಜನರು ಹೊಗಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

**
‘ಮುಸ್ಲಿಮರು ಮತ ವ್ಯರ್ಥ ಮಾಡಬೇಡಿ’
ಬಿಜೆಪಿಗೆ ತಡೆ ಒಡ್ಡಬೇಕಿದ್ದರೆ ಮುಸ್ಲಿಮರು ಸಮಾಜವಾದಿ ಪಕ್ಷ ಅಥವಾ ಕಾಂಗ್ರೆಸ್‌ಗೆ ಮತ ನೀಡದೆ ಬಿಎಸ್‌ಪಿಗೆ ಮತ ನೀಡಬೇಕು ಎಂದು ಮಾಯಾವತಿ ಹೇಳಿದ್ದಾರೆ.

ಸಮಾಜವಾದಿ ಪಕ್ಷದಲ್ಲಿ ಒಳಜಗಳವಿದೆ. ಕಾಂಗ್ರೆಸ್‌ಗೆ ಉತ್ತರ ಪ್ರದೇಶದಲ್ಲಿ ನೆಲೆಯೇ ಇಲ್ಲ. ಹಾಗಾಗಿ ಈ ಪಕ್ಷಗಳಿಗೆ ಮತ ನೀಡಿ ಮುಸ್ಲಿಮರು ತಮ್ಮ ಮತವನ್ನು ವ್ಯರ್ಥ ಮಾಡಬಾರದು ಎಂದರು.
***
ಉರಿಯಲ್ಲಿ ಹುತಾತ್ಮರಾದ ಯೋಧರ ಚಿತೆಯ ಬೆಂಕಿ ಇನ್ನೂ ಆರಿಲ್ಲ. ಆದರೆ ಪ್ರಧಾನಿ ಮೋದಿ ಅವರು ರಾಜಕೀಯ ಕಾರಣಗಳಿಗಾಗಿ ಅದ್ದೂರಿ ದಸರಾ ಆಚರಿಸಲು ಲಖನೌಗೆ ಬರುತ್ತಿದ್ದಾರೆ.
-ಮಾಯಾವತಿ, ಬಿಎಸ್‌ಪಿ ಮುಖ್ಯಸ್ಥೆ

**
ಅಭಿವೃದ್ಧಿ ರಾಜಕಾರಣದಲ್ಲಿ ಮಾಯಾವತಿ ದೊಡ್ಡ ಸೊನ್ನೆ. ಈಗ ಅವರು ಜನರಲ್ಲಿ ಕೋಮು ಭಾವನೆ ಮೂಡಿಸಲು ಯತ್ನಿಸುತ್ತಿದ್ದಾರೆ. ಅಭಿವೃದ್ಧಿಯೇ ಬಿಜೆಪಿಯ ಕಾರ್ಯಸೂಚಿ.
-ಶ್ರೀಕಾಂತ್‌ ಶರ್ಮ, ಬಿಜೆಪಿ ಕಾರ್ಯದರ್ಶಿ

Comments are closed.