ನವದೆಹಲಿ: ವೃದ್ಧ ತಂದೆ-ತಾಯಂದಿರಿಂದ ದೂರ ಮಾಡಲು ಪತ್ನಿ ಯತ್ನಿಸಿದರೆ ಹಿಂದೂ ಧರ್ಮದ ಪುತ್ರ ಆಕೆಗೆ ವಿಚ್ಛೇದನ ನೀಡಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಮಹಿಳೆ ತನ್ನ ಪತಿಯ ಕುಟುಂಬದ ಬಹುಮುಖ್ಯ ಭಾಗವಾಗುತ್ತಾಳೆ, ಆತನ ಆದಾಯವನ್ನು ತಾನೊಬ್ಬಳೇ ಅನುಭವಿಸಬೇಕು ಎಂಬ ಏಕೈಕ ಕಾರಣಕ್ಕಾಗಿ ಪತಿಯನ್ನು ಆತನ ಪೋಷಕರಿಂದ ದೂರ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅನಿಲ್ ಆರ್ ದಾವೆ ಮತ್ತು ಎಲ್.ನಾಗೇಶ್ವರ ರಾವ್ ಅವರಿದ್ದ ನ್ಯಾಯಪೀಠ ಹೇಳಿದೆ.
ತಂದೆ-ತಾಯಿಗಳನ್ನು ಬಿಟ್ಟು ಪ್ರತ್ಯೇಕವಾಗಿರಬೇಕು ಎಂದು ಪತಿಯನ್ನು ಒತ್ತಾಯಿಸುವುದು ಭಾರತೀಯ ಸಂಸ್ಕೃತಿ ಮತ್ತು ತತ್ವಗಳಿಗೆ ವಿರುದ್ಧವಾಗಿದ್ದು, ಪಾಶ್ಚಾತ್ಯ ಕ್ರಮ ಎನಿಸಿಕೊಳ್ಳುತ್ತದೆ ಎಂದು ನ್ಯಾಯಮೂರ್ತಿ ದಾವೆ ತೀರ್ಪಿನಲ್ಲಿ ಬರೆದಿದ್ದಾರೆ.
ಭಾರತೀಯ ಹಿಂದೂ ಪದ್ಧತಿಯಲ್ಲಿ ಪುತ್ರನು ತಂದೆ-ತಾಯಿಯ ಜೀವನದಲ್ಲಿ ಮುಖ್ಯವಾಗಿರುವಾಗ ಮದುವೆಯಾದ ನಂತರ ಆತನ ಪತ್ನಿ, ಪೋಷಕರಿಂದ ದೂರವಿದ್ದು ಜೀವನ ನಡೆಸಬೇಕೆಂದು ಹೇಳುವುದು ಸರಿಯಾದ ಕ್ರಮವಲ್ಲ. ಮಗನನ್ನು ಸಾಕಿ ಬೆಳೆಸಿ, ಓದಿಸಿ ದೊಡ್ಡವನನ್ನಾಗಿ ಮಾಡಲು ತಂದೆ ತಾಯಂದಿರು ಕಷ್ಟಪಡುತ್ತಾರೆ. ಹಾಗಿರುವಾಗ ಇಳಿ ವಯಸ್ಸಿನಲ್ಲಿ ತಂದೆ-ತಾಯಂದಿರನ್ನು ಚೆನ್ನಾಗಿ ನೋಡಿಕೊಳ್ಳುವುದು ಮಕ್ಕಳ ನೈತಿಕ ಮತ್ತು ಮಾನವೀಯ ಹೊಣೆಯಾಗಿರುತ್ತದೆ ಎಂದು ನ್ಯಾಯಾಧೀಶರು ವಿವರಿಸಿದರು.
ಭಾರತದಲ್ಲಿ ಪಾಶ್ಚಾತ್ಯ ಚಿಂತನೆ, ಆಲೋಚನೆ, ಜೀವನಶೈಲಿಯನ್ನು ಜನರು ಅಳವಡಿಸಿಕೊಳ್ಳುವುದಿಲ್ಲ. ಅಲ್ಲಾದರೆ ದೊಡ್ಡವನಾಗುತ್ತಿದ್ದಂತೆ ಅಥವಾ ಮದುವೆಯಾಗುತ್ತಿದ್ದಂತೆ ತಂದೆ-ತಾಯಿ, ಕುಟುಂಬದವರಿಂದ ದೂರವಾಗುತ್ತಾನೆ. ಭಾರತದಲ್ಲಿ ಸಾಮಾನ್ಯ ಪರಿಸ್ಥಿತಿಯಲ್ಲಿ ಮದುವೆಯಾದ ನಂತರ ಪತ್ನಿ ತನ್ನ ಗಂಡನ ಕುಟುಂಬದೊಂದಿಗೆ ಜೀವನ ನಡೆಸುತ್ತಾಳೆ. ಆಕೆ ಗಂಡನ ಕುಟುಂಬದ ಅವಿಭಾಜ್ಯ ಅಂಗವಾಗುತ್ತಾಳೆ. ಬಲವಾದ ಕಾರಣಗಳಿಲ್ಲದೆ ಆಕೆ ಗಂಡನಿಂದ ಮತ್ತು ಗಂಡನ ಮನೆಯವರಿಂದ ದೂರವಾಗಲು ಬಯಸಬಾರದು ಎಂದು ಜಸ್ಟೀಸ್ ದಾವೆ ಹೇಳಿದ್ದಾರೆ.
ಕರ್ನಾಟಕ ಮೂಲದ ದಂಪತಿಯ ವಿಚ್ಛೇದನ ಪ್ರಕರಣ ಕುರಿತು ವಿಚಾರಣೆ ನಡೆಸಿ ತೀರ್ಪು ನೀಡುವ ಸಂದರ್ಭದಲ್ಲಿ ಕೋರ್ಟ್ ಹೀಗೆ ಹೇಳಿದೆ.