ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯ ಸ್ಥಿತಿ ಕುರಿತಾಗಿ ಸರ್ಕಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲು ಆದೇಶಿಸುವಂತೆ ಸಲ್ಲಿಸಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈ ಕೋರ್ಟ್ ವಜಾಮಾಡಿದೆ.
ಜಯಲಲಿತಾ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ವಿಸ್ತೃತ ವರದಿ ನೀಡುವಂತೆ ಸರ್ಕಾರಕ್ಕೆ ಆದೇಶಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ರಾಮಸ್ವಾಮಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
ಇದು ಪ್ರಚಾರಕ್ಕಾಗಿ ಸಲ್ಲಿಕೆಯಾಗಿರುವ ಅರ್ಜಿಯಾಗಿದೆ ಹಾಗೂ ವಿಚಾರವನ್ನು ರಾಜಕೀಯ ಪ್ರಕರಣವಾಗಿಸುವ ಪ್ರಯತ್ನವಿದೆ. ಇದು ಸಾರ್ವಜನಿಕ ಅರ್ಜಿಯಾಗಿಲ್ಲ ಎಂದು ಅಭಿಪ್ರಾಯ ಪಟ್ಟಿರುವ ಮುಖ್ಯನ್ಯಾಯಮೂರ್ತಿ ಸಂಜಯ್ ಕಿಷನ್ ಕೌಲ್ ಹಾಗೂ ಆರ್ ಮಹದೇವನ್ ಅವರನ್ನು ಒಳಗೊಂಡ ಮದ್ರಾಸ್ ಹೈ ಕೋರ್ಟ್ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿದೆ.
ಚೆನ್ನೈನ ಅಪೋಲೋ ಆಸ್ಪತ್ರೆಗೆ ಸೆ.22ರಂದು ದಾಖಲಾಗಿರುವ ಮುಖ್ಯಮಂತ್ರಿ ಜಯಲಲಿತಾ ಈವರೆಗೂ ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಇದುವರೆಗೂ ಆಸ್ಪತ್ರೆ ಅಧಿಕಾರಿಗಳಿಂದಷ್ಟೇ ಮಾಹಿತಿ ಬಿಡುಗಡೆಯಾಗಿದೆ.
ಸರ್ಕಾರವೇ ಅಧಿಕೃತ ಹೇಳಿಕೆಯೊಂದನ್ನು ನೀಡಿದರೆ ಜನರಲ್ಲಿನ ಆತಂಕ ಕಡಿಮೆ ಆಗುತ್ತದೆ. ಈ ಅರ್ಜಿಗೆ ಪ್ರತಿ ಹೇಳಿಕೆಯನ್ನು ಬುಧವಾರದೊಳಗೆ ಸಲ್ಲಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಮಂಗಳವಾರ ಮೌಖಿಕವಾಗಿ ಹೇಳಿತ್ತು.