ರಾಷ್ಟ್ರೀಯ

ಟ್ರಕ್ ಚಾಲಕರನ್ನು ಉಗ್ರರೆಂದು ಬಂಧನ

Pinterest LinkedIn Tumblr

sbi-cash-truck-tamil-naduರಾಯಗಢ: ಸೇನಾ ಸಮವಸ್ತದಂತೆ ಕಾಣುತ್ತಿದ್ದ ಬಟ್ಟೆ ತೊಟ್ಟಿದ್ದ ಮೂವರು ಟ್ರಕ್ ಚಾಲಕರನ್ನು ಉಗ್ರರು ಎಂದು ಭಾವಿಸಿದ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ ಘಟನೆ ಮಹಾರಾಷ್ಟ್ರದ ರಾಯಗಢದ ಸಮೀಪ ಶನಿವಾರ ನಡೆದಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮುಂಬೈನಲ್ಲಿ ಇತ್ತೀಚೆಗೆ ಕೆಲವು ಶಂಕಿತ ವ್ಯಕ್ತಿಗಳು ಶಸ್ತ್ರಾಸ್ತ್ರಗಳೊಂದಿಗೆ ಕಾಣಿಸಿಕೊಂಡ ನಂತರ ಮಹಾರಾಷ್ಟ್ರದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಶಂಕಿತರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಕೇಂದ್ರ ಕೈಗಾರಿಕಾ ಪಡೆಯ ಯೋಧರಿದ್ದ ಬಸ್ ಗವಹಾನ್ಪಟ್ಟ ಸಮೀಪ ಚಲಿಸುತ್ತಿದ್ದಾಗ ಯೋಧರು ಮೂವರು ಶಂಕಿತರನ್ನು ಗಮನಿಸಿದ್ದಾರೆ. ಇವರು ಸೇನಾ ಸಮವಸ್ತ್ರದಂತಿದ್ದ ಬಟ್ಟೆ ಧರಿಸಿ ಟ್ರಕ್ ಒಂದರ ಸಮೀಪ ನಿಂತಿದ್ದರು. ಇವರ ಮೇಲೆ ಅನುಮಾನಗೊಂಡ ಯೋಧರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಶಂಕಿತರು ತಾವು ಕಾಶ್ಮೀರ ಮೂಲದವರು ಈ ಮುನ್ನ ಸೇನೆಯಲ್ಲಿ ಕೆಲಸ ಮಾಡುತ್ತಿದ್ದೆವು. ಈಗ ಖಾಸಗಿ ಟ್ರಕ್ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಸರಕನ್ನು ಟ್ರಕ್ನಲ್ಲಿ ಹೊತ್ತೊಯ್ಯುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ. ಕೂಡಲೇ ಕಂಪನಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ವಿಷಯ ಮನವರಿಕೆ ಮಾಡಿಕೊಟ್ಟಿದ್ದಾರೆ. ನಂತರ ಪೊಲೀಸರು ಶಂಕಿತರನ್ನು ಬಿಟ್ಟು ಕಳುಹಿಸಿದ್ದು, ಮುಂಬೈನಲ್ಲಿ ಕಾಣಿಸಿಕೊಂಡಿದ್ದವರಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.

Comments are closed.