ನವದೆಹಲಿ: ಕೇಂದ್ರ ಸರ್ಕಾರ ತ್ರಿವಳಿ ತಲಾಕ್ ಪದ್ಧತಿಯ ವಿರುದ್ಧ ಸುಪ್ರೀಂ ಕೋರ್ಟ್ ಗೆ ಪ್ರತಿಕ್ರಿಯೆ ನೀಡಲು ನಿರ್ಧರಿಸಿದೆ.
ಮುಸ್ಲಿಂ ಸಮುದಾಯದಲ್ಲಿರುವ ತ್ರಿವಳಿ ತಲಾಕ್ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿ ಹಲವು ಮಹಿಳಾ ಸಂಘಟನೆಗಳು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿತ್ತು. ಸುಪ್ರೀಂ ಕೋರ್ಟ್ ಗೆ ನೀಡಬೇಕಿರುವ ಪ್ರತಿಕ್ರಿಯೆ ಬಗ್ಗೆ ಚರ್ಚಿಸಲು ಸಭೆ ಸೇರಿದ್ದ ಸಚಿವರ ಸಮಿತಿ ತ್ರಿವಳಿ ತಲಾಕ್ ಪದ್ಧತಿ ವಿರುದ್ಧ ಸುಪ್ರೀಂ ಕೋರ್ಟ್ ಗೆ ಪ್ರತಿಕ್ರಿಯೆ ನೀಡಲು ನಿರ್ಧರಿಸಿದೆ.
ವಿಶ್ವದಾದ್ಯಂತ ಮಹಿಳೆಯರು ಸಮಾನತೆಯೆಡೆಗೆ ಹೆಜ್ಜೆ ಇಡುತ್ತಿದ್ದಾರೆ. ಅಂತೆಯೇ ನಾವು ಸಹ ಸಮಾನತೆಯೆಡೆಗೆ ಸಾಗಬೇಕಿದೆ ಎಂದು ಸಚಿವರೂಗಳ ಸಮಿತಿ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ ಭಾಗವಹಿಸಿದ್ದರು.
ತ್ರಿವಳಿ ತಲಾಕ್ ಬಗ್ಗೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆ/ ಅಭಿಪ್ರಾಯವನ್ನು ಕಾನೂನು ಸಚಿವಾಲಯ ಸಿದ್ಧಪಡಿಸಲಿದ್ದು, ತ್ರಿವಳಿ ತಲಾಕ್ ನಿಷೇಧ ಹಾಗೂ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದರ ಪರವಾಗಿರುವ ನಿರೀಕ್ಷೆ ಇದೆ. ತ್ರಿವಳಿ ತಲಾಕ್ ಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಉದಾಹರಣೆಗಳನ್ನು ಸಂಗ್ರಹಿಸಲಿರುವ ಕೇಂದ್ರ ಸರ್ಕಾರ, ಸೌದಿ ಅರೇಬಿಯಾ, ಇರಾಕ್ ಸೇರಿದಂತೆ ಮುಸ್ಲಿಂ ರಾಷ್ಟ್ರಗಳಲ್ಲಿ ಇಂತಹ ಪದ್ಧತಿಗಳನ್ನು ನಿಷೇಧಿಸಿರುವುದನ್ನು ಉಲ್ಲೇಖಿಸಲಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ
Comments are closed.