ಭೋಪಾಲ್, ಸೆ.15: ದೇಶದಲ್ಲಿ ವಿಚ್ಛೇದಿತ ಮಕ್ಕಳೂ ಇದ್ದಾರೆಯೇ? ಹೌದು ಎನ್ನುತ್ತದೆ 2011ರ ಜನಗಣತಿ ಅಂಕಿಅಂಶ. ದೇಶದಲ್ಲಿ 10ರಿಂದ 14 ವರ್ಷದೊಳಗಿನ ಮಕ್ಕಳ ಪೈಕಿ 12,105 ಮಂದಿ ವಿಚ್ಛೇದಿತರಿದ್ದಾರೆ. ಈ ಪೈಕಿ ಶೇಕಡ 53.67ರಷ್ಟು ಮಂದಿ ಅಥವಾ 6497 ಬಾಲಕಿಯರು. ಆದರೆ ಜನಗಣತಿ ರಿಜಿಸ್ಟ್ರಾರ್ ಜನರಲ್ ಹಾಗೂ ಭಾರತದ ಜನಗಣತಿ ಆಯುಕ್ತರು ಇಂಥ ವರ್ಗೀಕರಣಕ್ಕೆ ಯಾವ ಕಾನೂನು ಹಿನ್ನೆಲೆ ಇದೆ ಎನ್ನುವುದನ್ನು ವಿವರಿಸಲು ವಿಫಲರಾಗಿದ್ದಾರೆ. ದೇಶದಲ್ಲಿ ಬಾಲ್ಯವಿವಾಹವೇ ನಿಷೇಧ ಇರುವಾಗ ಪ್ರೌಢಾವಸ್ಥೆಗೆ ತಲುಪುವ ಮುನ್ನವೇ ಹೇಗೆ ಇವರು ವಿಚ್ಛೇದಿತರಾಗುತ್ತಾರೆ ಎನ್ನುವುದಕ್ಕೆ ಸಮರ್ಥನೆ ನೀಡಲು ಅಧಿಕಾರಿಗಳು ವಿಫಲರಾಗಿದ್ದಾರೆ.
ದೇಶದಲ್ಲಿ ಬಾಲ್ಯವಿವಾಹದ ಅನಿಷ್ಟ ಪದ್ಧತಿ ಇನ್ನೂ ಮುಂದುವರಿದಿರುವುದು ಈ ಅಂಕಿಅಂಶಗಳಿಂದ ಸ್ಪಷ್ಟವಾಗಿ ತಿಳಿದುಬರುತ್ತದೆ.
ಇಂಥ ಬಾಲವಿಚ್ಛೇದಿತ ಪ್ರಕರಣಗಳಲ್ಲಿ ಮಹಾರಾಷ್ಟ್ರ ಮುಂದಿದೆ. ಈ ರಾಜ್ಯದಲ್ಲಿ ಅತ್ಯಧಿಕ ಎಂದರೆ 1,984 ಮಂದಿ ಬಾಲ ವಿಚ್ಛೇದಿತರಿದ್ದಾರೆ. ಉತ್ತರ ಪ್ರದೇಶ (1,875), ಗುಜರಾತ್ (1,638), ಪಶ್ಚಿಮ ಬಂಗಾಳ (1,286) ಹಾಗೂ ಬಿಹಾರ (801) ನಂತರದ ಸ್ಥಾನಗಳಲ್ಲಿವೆ. ರಾಜಸ್ಥಾನವನ್ನು ದೇಶದ ಬಾಲ್ಯವಿವಾಹದ ರಾಜಧಾನಿ ಎಂದು ಕರೆಯಲಾಗುತ್ತಿದ್ದು, ಇಲ್ಲಿ ಕೇವಲ 366 ಅಪ್ರಾಪ್ತ ವಯಸ್ಸಿನವರು ಮಾತ್ರ ವಿಚ್ಛೇದಿತರಾಗಿದ್ದಾರೆ.
ಇದು ಜನಗಣತಿದಾರರು ಮನೆ ಮನೆಗೆ ಹೋಗಿ ಸಂಗ್ರಹಿಸಿದ, ಮನೆಯವರೇ ನೀಡಿದ ಅಧಿಕೃತ ಮಾಹಿತಿಯಾಗಿದ್ದು, ಇದನ್ನು ದಾಖಲಿಸಲಾಗಿದೆ ಎಂದು ಜನಗಣತಿ ನಿರ್ದೇಶನಾಲಯದ ಜಂಟಿ ನಿರ್ದೇಶಕ ಮಧ್ಯಪ್ರದೇಶ ಮೂಲದ ಎ.ಕೆ.ಸಕ್ಸೇನಾ ಸ್ಪಷ್ಟಪಡಿಸಿದ್ದಾರೆ.

Comments are closed.