ರಾಷ್ಟ್ರೀಯ

ಅಭಿವ್ಯಕ್ತಿ ಸ್ವಾತಂತ್ರ್ಯದ ಮಿತಿಮೀರಿದ ಬಳಕೆಗೆ ನಿದರ್ಶನ

Pinterest LinkedIn Tumblr

free-speechದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯ (ಜೆಎನ್‌ ಯು)ದಲ್ಲಿ ವಿದ್ಯಾರ್ಥಿಗಳು ದೇಶದ ವಿರುದ್ಧ ಕೂಗಿದ್ದಾರೆನ್ನಲಾದ ಘೋಷಣೆಯಿಂದ ಆದ ಅಹಿತಕರ ಘಟನೆಗಳ ನೆನಪು ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಅಂತಹುದೇ ವಿದ್ಯಮಾನವೊಂದು ಜರುಗಿರುವುದು ನಿಜಕ್ಕೂ ಅನಪೇಕ್ಷಿತ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮಿತಿಮೀರಿ ಬಳಸಿದರೆ ಏನಾಗುತ್ತದೆ ಎಂಬುದಕ್ಕೆ ನಿದರ್ಶನವಿದು.

ಕಾಶ್ಮೀರದಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸುವ ನೆಪದಲ್ಲಿ ಬೆಂಗಳೂರಿನ ಕಾಲೇಜೊಂದರಲ್ಲಿ ಸಭೆ ನಡೆಸಿದ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಎಂಬ ಮಾನವ ಹಕ್ಕುಗಳ ಪರ ಹೋರಾಡುವ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ)
ಈ ವಿವಾದದ ಕೇಂದ್ರ ಬಿಂದು. ಈ ಸಭೆಯಲ್ಲಿ ಕೆಲವರು ಭಾರತೀಯ ಸೇನೆಯ ವಿರುದ್ಧ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದರು ಎಂಬುದು ಆರೋಪ. ಇದನ್ನು ಖಂಡಿಸಿ ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಆ ಸ್ಥಳದಲ್ಲೇ
ಪ್ರತಿಭಟನೆ ನಡೆಸಿದ್ದು, ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಪ್ರಾಥಮಿಕ ಮಾಹಿತಿ ಕಲೆಹಾಕಿ ದೇಶದ್ರೋಹದ ಕೇಸು ದಾಖಲಿಸಿದ್ದು, ನಂತರ ಪೊಲೀಸರು ಪ್ರತಿಭಟನಾನಿರತ ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದು… ಹೀಗೆ ನಾನಾ ರೀತಿಯ ವಿದ್ಯಮಾನಗಳು ಜರುಗಿ ಈಗಾಗಲೇ ಇದೊಂದು ರಾಷ್ಟ್ರೀಯ ವಿವಾದದ ಸ್ವರೂಪ ಪಡೆದಾಗಿದೆ.

ಇಂತಹ ವಿಷಯದಲ್ಲಿ ರಾಜಕಾರಣಿಗಳು ಹಾಗೂ ಜನಸಾಮಾನ್ಯರು ಸಂಯಮ ಪ್ರದರ್ಶಿಸಿದಷ್ಟೂ ಒಳ್ಳೆಯದು. ಇಲ್ಲದಿದ್ದರೆ ಮೂಲ ಹೇಳಿಕೆಗಿಂತ ಹೆಚ್ಚಾಗಿ ನಂತರದ ವಿದ್ಯಮಾನಗಳೇ ರಾಷ್ಟ್ರೀಯ ಏಕತೆಗೆ ಭಂಗಕ್ಕೆ
ಕಾರಣವಾಗುತ್ತವೆ. ಇದಕ್ಕೆ ಹಿಂದಿನ ಘಟನೆಯೇ ಸಾಕ್ಷಿ. ಸಮಸ್ಯೆಯಿರುವುದು ನಮ್ಮ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳುವ ಅಥವಾ ಅದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ತೋಚಿದ್ದನ್ನು ಮಾತನಾಡುವ ಮನಸ್ಥಿತಿಯಲ್ಲಿ. ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ವಕಾಲತ್ತು ವಹಿಸಿ ಇಂತಹ ಅತಿ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವವರು ಸಂವಿಧಾನದ 19 (1)ನೇ ಪರಿಚ್ಛೇದದಲ್ಲಿ ನೀಡಲಾದ ವ್ಯಾಖ್ಯೆಯನ್ನಷ್ಟೇ
ಉದಾಹರಿಸುತ್ತಾರೆ. ಆದರೆ, ಅಲ್ಲೇ ಮುಂದಿರುವ 19 (2) ಪರಿಚ್ಛೇದವು ಸಂವಿಧಾನಬದ್ಧವಾಗಿಯೇ ನಮಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಿತಿಗಳನ್ನೂ ವಿಧಿಸಿದೆ. ಅಮೆರಿಕದಲ್ಲಿರುವಂತೆ ನಮ್ಮಲ್ಲಿ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ. ಅಮೆರಿಕದಲ್ಲಿ ಯಾರು ಏನು ಬೇಕಾದರೂ ಹೇಳಬಹುದು. ಅದರ ನಿಯಂತ್ರಣಕ್ಕೆ ಅಮೆರಿಕದ ಸಂಸತ್ತು ಯಾವುದೇ
ಕಾಯ್ದೆ ಜಾರಿಗೆ ತರುವಂತಿಲ್ಲ. ಆದರೆ, ನಮ್ಮ ದೇಶದಲ್ಲಿ ಹಾಗಿಲ್ಲ.

ನಮ್ಮ ಸಂವಿಧಾನವು ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡುವುದರ ಜೊತೆಗೇ ಅದಕ್ಕೆ ಮಿತಿಗಳನ್ನೂ ಹೇರಿದೆ. ದೇಶದ ಭದ್ರತೆಗೆ ಧಕ್ಕೆ ತರುವ, ವಿದೇಶಗಳ ಜೊತೆಗಿನ ಸ್ನೇಹಕ್ಕೆ ಭಂಗ ತರುವ, ಸಾರ್ವಜನಿಕ ಶಿಸ್ತಿಗೆ ಭಂಗ
ತರುವ, ನೈತಿಕತೆಯನ್ನು ಮೀರುವ, ನ್ಯಾಯಾಂಗ ನಿಂದನೆ ಮಾಡುವ, ಅಪರಾಧ ಪ್ರಚೋದಿಸುವ ಹಾಗೂ ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಭಂಗ ತರುವ ನಿಟ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಕೆ ಮಾಡುವಂತಿಲ್ಲ. ಇದನ್ನು ನಿಯಂತ್ರಿಸಲು ಸಂಸತ್ತು ಕಾಯ್ದೆಗಳನ್ನು ರೂಪಿಸಬಹುದು. ದೇಶದ ಸಾರ್ವಭೌಮತೆ ಹಾಗೂ ಭದ್ರತೆಯನ್ನು ಕಾಪಾಡುವ ಗುರುತರ ಹೊಣೆಯನ್ನು ನಿಭಾಯಿಸುತ್ತಿರುವ ಸೇನೆಯ ವಿರುದ್ಧ ಜನರನ್ನು ಪ್ರಚೋದಿಸುವಂತೆ ಘೋಷಣೆ ಕೂಗುವುದು ದೇಶದ್ರೋಹವಾಗುತ್ತದೆ ಎಂಬ ಕಾರಣಕ್ಕೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್‌ ಹಾಗೂ ಘೋಷಣೆ ಕೂಗಿದ ಕೆಲ ಉಪನ್ಯಾಸಕರ ವಿರುದ್ಧ ಕರ್ನಾಟಕ ಪೊಲೀಸರು ಕೇಸು ದಾಖಲಿಸಿದ್ದಾರೆ. ಇದರ ತನಿಖೆಗೆ ಸಹಕಾರ ನೀಡುವುದರ ಹೊರತಾಗಿ ಜೆಎನ್‌ಯು ಘಟನೆಯನ್ನು ನಾನಾ ರೂಪದಲ್ಲಿ ದುರ್ಬಳಕೆ ಮಾಡಿಕೊಂಡ ರೀತಿಯ ಬೆಳವಣಿಗೆಗಳು
ರಾಜ್ಯದಲ್ಲಿ ನಡೆಯಬಾರದು. ಅದಕ್ಕೆ ಪೊಲೀಸರು ಹಾಗೂ ಸರ್ಕಾರ ಅವಕಾಶ ನೀಡಬಾರದು. ಸ್ವಾತಂತ್ರ್ಯೋತ್ಸವದ ಆಸುಪಾಸಿನಲ್ಲೇ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮತ್ತೊಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮಾಡಿದ ಘಟನೆ ಜರುಗಿದೆ. ಇದು ಎಲ್ಲರಿಗೂ ಒಂದು ಪಾಠವಾಗಬೇಕು.

-ಉದಯವಾಣಿ

Comments are closed.