ನವದೆಹಲಿ (ಪಿಟಿಐ): ‘ಕರ್ನಾಟಕದಿಂದ ಅಡಿಕೆ ಖರೀದಿಸಲು ತಾನು ಸಿದ್ಧ. ಆದರೆ, ಕಿಲೋ ಅಡಿಕೆಯನ್ನು ₹ 300ರಿಂದ ₹400ಕ್ಕೆ ಖರೀದಿಸಬೇಕು ಎಂದು ಕರ್ನಾಟಕ ಪ್ರಸ್ತಾಪಿಸಿರುವುದು ತೀರಾ ಹೆಚ್ಚು’ ಎಂದು ಕೇಂದ್ರ ಸರ್ಕಾರ ಹೇಳಿದೆ.
ದೇಶಿ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕುಸಿತ ಕಾಣುತ್ತಿರುವ ಸಂದರ್ಭದಲ್ಲೇ ಕೇಂದ್ರ ಈ ಮಾತು ಹೇಳಿದೆ.
ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯ (ಎಂಐಎಸ್) ಅಡಿ 40 ಸಾವಿರ ಟನ್ ಅಡಿಕೆ ಖರೀದಿಸಬೇಕು ಎಂದು ಕರ್ನಾಟಕ ಸರ್ಕಾರ ಮುಂದಿಟ್ಟಿರುವ ಪ್ರಸ್ತಾವನೆ ಬಗ್ಗೆ ಚರ್ಚಿಸಲು ಕೇಂದ್ರ ಕೃಷಿ ಸಚಿವಾಲಯವು ತನ್ನ ಹಿರಿಯ ಅಧಿಕಾರಿಯೊಬ್ಬರನ್ನು ಬೆಂಗಳೂರಿಗೆ ಕಳುಹಿಸಿದೆ.
ಅಡಿಕೆ ಬೆಲೆ ಕುಸಿತ ತಡೆಯಲು ಕೇಂದ್ರ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸಚಿವ ಅನಂತ ಕುಮಾರ್ ಸೇರಿದಂತೆ ಕರ್ನಾಟಕ ಬಿಜೆಪಿಯ ಹಲವು ಮುಖಂಡರು ಒತ್ತಾಯಿಸಿದ್ದರು.
2015–16ನೇ ಸಾಲಿನಲ್ಲಿ ಕರ್ನಾಟಕದಲ್ಲಿ 4.5 ಲಕ್ಷ ಟನ್ ಅಡಿಕೆ ಉತ್ಪಾದನೆ ಆಗಿದೆ ಎಂದು ನಿರ್ದೇಶನಾಲಯ ಅಂದಾಜಿಸಿದೆ. ಆದರೆ ರಾಜ್ಯ ಸರ್ಕಾರವು ಈ ಸಾಲಿನಲ್ಲಿ 4.07 ಲಕ್ಷ ಟನ್ ಉತ್ಪಾದನೆ ಆಗಿದೆ ಎಂದು ತಿಳಿಸಿದೆ. ಈ ಅಂಕಿ–ಅಂಶದಲ್ಲಿ ವ್ಯತ್ಯಾಸ ಇದೆ ಎಂದು ಕೃಷಿ ಸಚಿವಾಲಯ ಹೇಳಿದೆ.
ಕೇಂದ್ರದ ತಕರಾರು ಏಕೆ?: ಉತ್ಪಾದನೆ ಆಗಿರುವ ಬೇರೆ ಬೇರೆ ವಿಧದ ಅಡಿಕೆ ಗಳಲ್ಲಿ ಶೇಕಡ 10ರಷ್ಟು ಅಡಿಕೆಯನ್ನು ಮಾತ್ರ ಎಂಐಎಸ್ ಯೋಜನೆಯಡಿ ಖರೀದಿಸಬೇಕು. ಹಾಗಾಗಿ, 24,471 ಟನ್ ಚಾಲಿ, 16,314 ಟನ್ ಕೆಂಪಡಿಕೆ ಖರೀದಿ ಮಾಡಬೇಕು ಎಂಬುದು ಕೃಷಿ ಸಚಿವಾಲಯದ ನಿಲುವು.
ಆದರೆ ರಾಜ್ಯ ಸರ್ಕಾರವು, 28 ಸಾವಿರ ಟನ್ ಚಾಲಿ, 12 ಸಾವಿರ ಟನ್ ಕೆಂಪಡಿಕೆ ಖರೀದಿ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದೆ. ಚಾಲಿ ಅಡಿಕೆ ಯನ್ನು ಪ್ರತಿ ಕಿಲೋಗೆ ₹ 300ರಂತೆ, ಕೆಂಪಡಿಕೆಯನ್ನು ₹ 400ರಂತೆ ಖರೀದಿಸ ಬೇಕು ಎಂದಿದೆ. ಆದರೆ, ಅಡಿಕೆ ಮತ್ತು ಸಾಂಬಾರ ಪದಾರ್ಥ ನಿರ್ದೇಶನಾಲ ಯವು ಕಿಲೋ ಅಡಿಕೆಗೆ ₹ 172 ಬೆಲೆ ಶಿಫಾರಸು ಮಾಡಿದೆ. ಹಾಗಾಗಿ, ರಾಜ್ಯ ಸರ್ಕಾರದ ಪ್ರಸ್ತಾವಿತ ಬೆಲೆ ತೀರಾ ಹೆಚ್ಚು ಎಂಬುದು ಕೃಷಿ ಸಚಿವಾಲಯದ ಆಕ್ಷೇಪ.
ಕೇಂದ್ರದ ತೀರ್ಮಾನ ಆಧರಿಸಿ ಮುಂದಿನ ಹೆಜ್ಜೆ
ಬೆಂಗಳೂರು: ತೆಂಗು, ಅಡಿಕೆ ಹಾಗೂ ಕೊಬ್ಬರಿ ದರ ಕುಸಿತ ಸಮಸ್ಯೆ ಪರಿಹಾರಕ್ಕೆ ಕೇಂದ್ರ ಸರ್ಕಾರವು ಬುಧವಾರ ನಡೆಯಲಿರುವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡ ನಂತರ ಮುಂದಿನ ಹೆಜ್ಜೆ ಇಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
Comments are closed.