ಮುರ್ಷಿದಾಬಾದ್ (ಪಶ್ಚಿಮ ಬಂಗಾಳ): ಮಾನಸಿಕ ಅಸ್ವಸ್ಥರನ್ನು ಕಳೆದ ಆರು ತಿಂಗಳಿನಿಂದ ಬೆತ್ತಲೆಯಾಗೇ ಇಟ್ಟು ಚಿಕಿತ್ಸೆ ನೀಡಿರುವ ಘಟನೆ ಮುರ್ಷಿದಾಬಾದ್ ಜಿಲ್ಲೆಯ ಬೆಹ್ರಂಪುರ್ ನಗರದ ಮಾನಸಿಕ ಆಸ್ಪತ್ರೆಯಲ್ಲಿ ನಡೆದಿದೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಮಾನವ ಹಕ್ಕುಗಳ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಸುಪ್ರೀಂಕೋರ್ಟ್ ಮತ್ತು ರಾಷ್ಟ್ರಿಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಲು ತೀರ್ಮಾನಿಸಿದ್ದಾರೆ. ಬೆಹ್ರಂಪುರ್‍ನಲ್ಲಿರುವ ಮಾನಸಿಕ ಆಸ್ಪತ್ರೆ ಸಿಬ್ಬಂದಿ ಕಳೆದ ಆರು ತಿಂಗಳಿನಿಂದ ಇಲ್ಲಿನ ರೋಗಿಗಳನ್ನು ಬೆತ್ತಲೆಗೊಳಿಸಿ ಹಿಂಸೆ ನೀಡುತ್ತಿದ್ದಾರೆ. ಇದರಿಂದಾಗಿ ಮಾನವ ಹಕ್ಕುಗಳ ಕಾಯ್ದೆ ಉಲ್ಲಂಘಿಸಿದ್ದಾರೆ ಎಂದು ಮಾನವ ಹಕ್ಕು ಕಾರ್ಯಕರ್ತ ರತ್ನ ಬೋಲಿರಾಯ್ ಆರೋಪಿಸಿದ್ದಾರೆ.
ಈ ಆಸ್ಪತ್ರೆಯಲ್ಲಿ 25 ಮಹಿಳಾ ರೋಗಿಗಳು ಮತ್ತು 40 ಪುರುಷ ರೋಗಿಗಳು ಸೇರಿದಂತೆ ಒಟ್ಟು 65 ರೋಗಿಗಳನ್ನು 6 ತಿಂಗಳಿನಿಂದ ಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂಬ ದೂರು ಕೇಳಿಬಂದಿದೆ. ಅಲ್ಲಿಯ ರೋಗಿಗಳನ್ನು ನಗ್ನಗೊಳಿಸಿ ಚಿತ್ರಹಿಂಸೆ ನೀಡುತ್ತಿರುವ ಫೋ ಟೋವನ್ನು ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ್ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾಗೆ ಮಾನವ ಹಕ್ಕುಗಳ ಕಾರ್ಯಕರ್ತರು ಟ್ವೀಟ್ ಮಾಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿದ್ದ ಸಿಎಂಎಚ್‍ಒ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಯಾವುದೇ ರೀತಿಯ ಚಿತ್ರಹಿಂಸೆ ನೀಡುತ್ತಿಲ್ಲ ಹಾಗೂ ರೋಗಿಗಳನ್ನು ಬೆತ್ತಲೆಗೊಳಿಸಿಲ್ಲ. ಮಾಧ್ಯಮವದವರು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಬಹುದು ಎಂದು ಸಿಎಂಎಚ್‍ಒ ಪ್ರತಿಕ್ರಿಯಿಸಿದ್ದಾರೆ.
Comments are closed.