ನಾಗಪುರ: ಮಹಾರಾಷ್ಟ್ರದ ಈ ಹೊಸ ಯೋಜನೆಗೆ ಧನ್ಯವಾದ! ರೇಪ್ ಪ್ರಕರಣದ ತಪ್ಪಿತಸ್ಥ ಖೈದಿಯೊಬ್ಬ ಯೋಗ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ತನ್ನ ಬಂಧನ ಅವಧಿಯ 40 ದಿನಕ್ಕೂ ಮುಂಚಿತವಾಗಿಯೇ ನಾಗಪುರದ ಕೇಂದ್ರ ಕಾರಾಗೃಹದಿಂದ ಹೊರನಡೆದಿದ್ದಾನೆ.
ರಾಜ್ಯದ ಕಾರಾಗೃಹ ಇಲಾಖೆ ಚಾಲನೆ ನೀಡಿರುವ ಈ ಯೋಜನೆಯ ಮೊದಲ ಫಲಾನುಭವಿ ಶೀತಲ್ ಕವಾಳೆ. 2012 ರಲ್ಲಿ ನಾಗಪುರದ ಕೋರ್ಟ್ ಕವಾಳೆ ಸಂಬಂಧಿಯೊಬ್ಬರ ಅತ್ಯಾಚಾರ ನಡೆಸಿದ್ದಕ್ಕೆ ಶಿಕ್ಷೆ ನೀಡಿತ್ತು. ಈಗ ಈ ವರ್ಷದ ಮೊದಲ ಭಾಗದಲ್ಲಿ ಕವಾಳೆ ಯೋಗ ಪರೀಕ್ಷೆಯನ್ನು ಡಿಸ್ಟಿಂಕ್ಷನ್ ಪಡೆದು ಭರ್ಜರಿಯಾಗಿ ಪಾಸ್ ಮಾಡಿದ್ದಾನೆ.
“ಕವಾಳೆ 100 ಅಂಕಗಳ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾನೆ. ಆದುದರಿಂದ ಅವನಿಗೆ ಜೈಲು ಶಿಕ್ಷೆಯಲ್ಲಿ 40 ದಿನಗಳನ್ನು ಕಡಿತಗೊಳಿಸಿದ್ದೇವೆ” ಎಂದು ಕೇಂದ್ರ ಕಾರಾಗೃಹದ ಸೂಪರಿಂಟೆಂಡೆಂಟ್ ಯೋಗೇಶ್ ದೇಸಾಯಿ ಬುಧವಾರ ಹೇಳಿದ್ದಾರೆ. ಈ ಪರೀಕ್ಷೆ ತೇರ್ಗಡೆಗೊಂಡಿರುವ 100 ಕ್ಕೂ ಹೆಚ್ಚು ಖೈದಿಗಳು ಶಿಕ್ಷೆ ಕಡಿತಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.
“ಆದರೆ ಇವರ ಶಿಕ್ಷೆಯ ಅವಧಿ ಇನ್ನೇನು ಪೂರ್ಣಗೊಳ್ಳುತ್ತಿದ್ದರಿಂದ ಕವಾಳೆ ಮತ್ತು ಇನ್ನೊಬ್ಬ ಖೈದಿಯನ್ನಷ್ಟೇ ಬಿಡುಗಡೆ ಮಾಡಿದ್ದೇವೆ” ಎಂದು ದೇಸಾಯಿ ಹೇಳಿದ್ದಾರೆ.
“ಶಿಕ್ಷೆಯ ಅವಧಿಯಲ್ಲಿ ಕಡಿತ, ಭಯೋತ್ಪಾದಕ ಚಟುವಟಿಕೆಗಳ ತಪ್ಪಿತಸ್ಥರಿಗೆ ಮತ್ತು ಡ್ರಗ್ ಅಪರಾಧಿಗಳಿಗೆ ಅನ್ವಯವಾಗುವುದಿಲ್ಲ” ಎಂದು ಕಾರಾಗೃಹಗಳ ಪ್ರಧಾನ ಇನ್ಸ್ಪೆಕ್ಟರ್ ಮತ್ತು ಹೆಚ್ಚುವರಿ ಪೊಲೀಸ್ ಪ್ರಧಾನ ನಿರ್ದೇಶಕ ಭೂಷಣ್ ಉಪಾಧ್ಯಾಯ ಹೇಳಿದ್ದಾರೆ. ಮುಂದಿನ ಯೋಗ ಪರೀಕ್ಷೆಯನ್ನು ಈ ವರ್ಷದ ಅಕ್ಟೊಬರ್ ನಲ್ಲಿ ನಡೆಸಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ.
ಜೀವನದ ಎಲ್ಲ ಆಯಾಮಗಳಲ್ಲಿ ಸಾಂಪ್ರದಾಯಿಕ ಶಿಸ್ತನ್ನು ರೂಪಿಸಲು ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದ ಹಿನ್ನಲೆಯಲ್ಲಿ ಯೋಗ ಪರೀಕ್ಷೆ ನಡೆಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಮಹಾರಾಷ್ಟ್ರದ ಎಲ್ಲ 7 ಕೇಂದ್ರ ಕಾರಾಗೃಹಗಳಲ್ಲಿ, ರಾಜ್ಯ ಕಾರಾಗೃಹ ಇಲಾಖೆ ಯೋಗ ಪರೀಕ್ಷೆ ನಡೆಸಿತ್ತು.
ವಿವಿಧ ಜೈಲುಗಳಲ್ಲಿ ಮೇ ಮತ್ತು ಜೂನ್ ನಡುವೆ ಮೊದಲ ಪರೀಕ್ಷೆಯನ್ನು ನಡೆಸಲಾಗಿದ್ದು, ಜುಲೈ ಅಂತಕ್ಕೆ ಫಲಿತಾಂಶ ಹೊರಬಿದ್ದಿದೆ. ಈ ಪರೀಕ್ಷೆ ಬರವಣಿಗೆ ಮತ್ತು ದೈಹಿಕ ಪ್ರಯೋಗ ಎರಡಕ್ಕೂ ಸಮನಾದ ಅಂಕಗಳನ್ನು ನಿಗದಿಪಡಿಸಿತ್ತು.
ಜೈಲಿನಿಂದ ಹೊರನಡೆದವರಲ್ಲಿ ಕವಾಳೆ ಮೊದಲಿಗರಾಗಿದ್ದರು, ನಾಗಪುರ ಮತ್ತು ಔರಂಗಾಬಾದ್ ಜೈಲುಗಳ ತಲಾ ನಾಲ್ಕು ಖೈದಿಗಳಿಗೆ 30-40 ದಿನಗಳ ಶಿಕ್ಷೆಯನ್ನು ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
Comments are closed.